ಸ್ಟೇಟಸ್ ಕತೆಗಳು (ಭಾಗ ೫೫೩) - ಬೆಕ್ಕು

ಸ್ಟೇಟಸ್ ಕತೆಗಳು (ಭಾಗ ೫೫೩) - ಬೆಕ್ಕು

ನಾನು ತುಂಬಾ ಸಮಯದ ನಂತರ ಮನೆಯ ಕಡೆಗೆ ಪಯಣ ಬೆಳೆಸಿದ್ದೆ. ಊರಲ್ಲಿ ಒಂದಷ್ಟು ಬದಲಾವಣೆಯಾಗಿತ್ತು. ಮನೆ ನಂದಲ್ವಾ ಬದಲಾವಣೆ ಆಗಿರಲಿಕ್ಕಿಲ್ಲ ಅಂದುಕೊಂಡಿದ್ದೆ ,ಆದರೆ ನಮ್ಮ ಮನೆಯ ಬೆಕ್ಕಿನ ದಿನಚರಿಯೇ ಬದಲಾಗಿ ಬಿಟ್ಟಿತ್ತು. ನಾನು ಮೊದಲು ಸಲ ಮನೆಗೆ ಹೋದಾಗ ಬೆಕ್ಕು ಏನು ಹಾಕಿದ್ರು ತಿನ್ನುತಿತ್ತು, ನನ್ನ ಬಳಿಯೇ ಆ ಕಡೆ ಈ ಕಡೆ ಓಡಾಡ್ತಾ ಇತ್ತು. ಆದರೆ ಒಂದಾರು ತಿಂಗಳು ಬಿಟ್ಟು ಈಗ ಮನೆಗೆ ಹೋಗ್ತೇನೆ ಬೆಕ್ಕು ಹಾಕಿದ್ದನ್ನೆಲ್ಲಾ ತಿನ್ನುವುದಿಲ್ಲ, ಅದಲ್ಲದೆ ಹಾಕಿದ್ದರಲ್ಲಿ ಒಂದಷ್ಟು ಭಾಗವನ್ನು ಮಾತ್ರ ತಿಂದು ಮತ್ತೆ ಹೊಸತೇನಾದರೂ ತಿನ್ನುವುದಕ್ಕೆ ಕಾಯ್ತಾ ಇದೆ. ಈ ಬದಲಾವಣೆ ಯಾಕಾಯಿತು ಅಂತಂದ್ರೆ ಇತ್ತೀಚಿಗೆ ಪಕ್ಕದ ಮನೆಗೆ ಬಂದ ಬೆಂಗಳೂರಿನ ದಂಪತಿಗಳು ಅದಕ್ಕೆ ವಿಶೇಷವಾದ ತಿಂಡಿ ಒಂದನ್ನ ಕೊಟ್ಟು ಬಿಟ್ಟಿದ್ದರು, ಅದು ತುಂಬಾ ರುಚಿಯಾಗಿತ್ತು .ಅವರು ವಾಪಾಸ್ ಊರಿಗೆ ಹೋಗುವಾಗ ಒಂದು ಡಬ್ಬ ಅದೇ ತಿಂಡಿಯನ್ನು ಕೊಟ್ಟು ಬೆಕ್ಕಿಗೆ ಕೊಟ್ಟುಬಿಡಿ ಅಂತಾನೂ ಹೇಳಿದ್ರು. ನಮ್ಮನೆ ಬೆಕ್ಕಿಗೆ ಅದನ್ನು ಬಿಟ್ಟು ಬೇರೆ ಯಾವುದು ರುಚಿಸೋದೇ ಇಲ್ಲ, ಅಷ್ಟು ದುಡ್ಡು ಕೊಟ್ಟು ಆ ತಿಂಡಿಯನ್ನ ಕೊಡುವಷ್ಟು ನಾವು ಸಾಮರ್ಥ್ಯವಂತರಲ್ಲ. ಆದರೂ ಬೆಕ್ಕಿಗೆ ಈಗ ತನ್ನ ಮೂಲ ಸ್ವಭಾವವೇ ಮರೆತು ಹೋಗಿದೆ. ಅದಲ್ಲದೆ ಸಣ್ಣಪುಟ್ಟ ತಿಂಡಿಗಳು ನಾಲಿಗೆಗೆ ರುಚಿಸುವುದೇ ಇಲ್ಲ. ಈಗ್ಲೂ ನನ್ನ ಕಾಲು ಬುಡದಲ್ಲಿ ಅದನ್ನೇ ಬೇಕು ಅನ್ನೋ ಹಠದಲ್ಲಿ ಕುಳಿತುಬಿಟ್ಟಿದೆ. ಕೊಡದೆ ಇದ್ದಾಗ ಹೊರಗಡೆ ಹೋಗಿ ಮತ್ತೆ ತಿರುಗಿ ಬಂದು ಅದೇ ತಿಂಡಿಗೆ ಕಾಯುತ್ತೇ ವಿನಃ ಹಾಕಿದ್ದನ್ನ ತಿನ್ನುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಅಲ್ಲ ಬೆಕ್ಕಿಗೆ ಇಷ್ಟು ಅಹಂಕಾರ ಬರುತ್ತದೆ ಅಂದಾಗ, ಮನುಷ್ಯನಿಗೆ ಬರೋದ್ರಲ್ಲಿ ವಿಶೇಷ ಏನಿದೆ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ