ಸ್ಟೇಟಸ್ ಕತೆಗಳು (ಭಾಗ ೫೫೯) - ಹೆಣ್ಣು

ಸ್ಟೇಟಸ್ ಕತೆಗಳು (ಭಾಗ ೫೫೯) - ಹೆಣ್ಣು

"ಧನ್ಯವಾದ. ಇಷ್ಟು ಹೇಳಿದ್ರೆ ಸಾಕ? ಇಲ್ಲಪ್ಪ. ಅವಳಿಗೆ ಅಭಿನಂದನೆ ಸಲ್ಲಿಸಬೇಕು. ಯಾಕೆಂದರೆ ಅವಳು ಹೆಣ್ಣಾಗಿ ಹುಟ್ಟಿರೋದಕ್ಕೆ. ಅವಳು ಮುಟ್ಟಾದ ಕಾರಣ ನಾವು ಹುಟ್ಟಿದ್ದೇವೆ. ಅವಳು ಸಹಿಸಿಕೊಂಡಿದ್ದಾಳೆ, ಕೋಪಿಸಿಕೊಂಡಿದ್ದಾಳೆ, ತಾಳ್ಮೆವಹಿಸಿದ್ದಾಳೆ, ಪ್ರೀತಿಸಿದ್ದಾಳೆ, ಗೌರವಿಸಿದ್ದಾಳೆ, ಕನಿಕರಿಸಿದ್ದಾಳೆ, ಮಮತೆಯ ಉಣ ಬಡಿಸಿದ್ದಾಳೆ, ಕಷ್ಟಪಟ್ಟಿದ್ದಾಳೆ, ಅತ್ತಿದ್ದಾಳೆ, ಬೇಡಿದ್ದಾಳೆ, ಇಷ್ಟೆಲ್ಲ ಮಾಡಿರುವ ಅವಳನ್ನ ಪೂಜಿಸುವುದು ನಮ್ಮ ಕರ್ತವ್ಯ ಅಲ್ವಾ? ನನ್ನ ಪ್ರಕಾರ ಅಲ್ಲ!. ಅವಳನ್ನ ಯಾವತ್ತೂ ಪೂಜಿಸಬಾರದು. ಗೌರವಿಸಬೇಕು, ಪ್ರೀತಿಸಬೇಕು. ಪೂಜೆ ಮಾಡಿದರೆ ಎತ್ತರದಲ್ಲಿಟ್ಟು ಬಿಟ್ಟು ಕೈ ಮುಗಿದು ನಿಲ್ತೇವೆ. ಅವರಿಗೂ ಮನಸ್ಸಿದೆ ಅವಳು ನಮ್ಮವಳು ಅನ್ನುವ ಯೋಚನೆ ನಮ್ಮೊಳಗೆ ಬರುವುದೇ ಇಲ್ಲ.  ಹೆಣ್ಣಾಗಿ ಜನಿಸಿದವಳು ಅಕ್ಕ,ತಂಗಿ, ಮಡದಿ, ತಾಯಿ, ಚಿಕ್ಕಮ್ಮ, ದೊಡ್ಡಮ್ಮ, ಗೆಳತಿ, ಸಹೋದರಿ, ಪ್ರೇಮಿ, ವಿದ್ಯಾರ್ಥಿನಿ ಇಷ್ಟೆಲ್ಲ ಪಾತ್ರಗಳನ್ನು ವಹಿಸಿ ಎಲ್ಲದಕ್ಕೂ ನ್ಯಾಯ ನೀಡಿ ಮತ್ತು ಹೊಸ ಪಾತ್ರಗಳ ಅನ್ವೇಷಣೆಯಲ್ಲಿ ಬದುಕ್ತಾ ಇದ್ದಾಳೆ. ಅವಳಿಗೆ ಗೊತ್ತು ನೋವನ್ನು ಮರೆಮಾಚಿ ನಗುವುದಕ್ಕೆ, ಕಷ್ಟಪಟ್ಟು ಸಾಧಿಸುವುದಕ್ಕೆ, ಜೊತೆ ನಿಲ್ಲುವುದಕ್ಕೆ, ಧೈರ್ಯ ನೀಡುವುದಕ್ಕೆ, ಪ್ರೀತಿ ತುಂಬುವುದಕ್ಕೆ, ಆತ್ಮೀಯ ಬಳಗವನ್ನ ಗಟ್ಟಿಗೊಳಿಸುವುದಕ್ಕೆ, ಹೊಸ ಆಲೋಚನೆಯನ್ನ ಬಿತ್ತುವುದಕ್ಕೆ, ಇಷ್ಟೆಲ್ಲ ಸಾಧ್ಯತೆ ಇರುವ ಒಂದು ಶಕ್ತಿಯನ್ನು ಪ್ರೀತಿಸಬೇಕು. ಹೆಚ್ಚೆಂದರೆ ಗೌರವಿಸಬೇಕು. ನನ್ನ ಕಡೆಯಿಂದ ನನ್ನ ಜೀವನದಲ್ಲಿ ಜೊತೆಯಾದ ಹಾದುಹೋದ ಎಲ್ಲ ಹೆಣ್ಣನ್ನೂ ಮನ ತುಂಬಿ ಪ್ರೀತಿಸುತ್ತೇನೆ. ಮುಂದಿನ ಬದುಕಿಗೆ ಹಾರೈಸುತ್ತೇನೆ. ಕಷ್ಟದಲ್ಲಿದ್ದರೆ ಜೊತೆ ನಿಲ್ಲುತ್ತೇನೆ, ಸಾಧ್ಯವಾದರೆ ಹೆಗಲು ಕೊಡುತ್ತೇನೆ," 

ಇಷ್ಟೆಲ್ಲಾ ಸಾಲುಗಳನ್ನ ಮುಗಿಸಿದ ಆತ ತಾನು ಕಳೆದುಕೊಂಡ ತನ್ನ ಕುಟುಂಬದವರ ಭಾವಚಿತ್ರಗಳಿಗೆ ದೀಪವಿಟ್ಟು... ನ್ಯಾಯಕ್ಕಾಗಿ ನ್ಯಾಯಾಲಯದ ಕಡೆಗೆ ನಡೆದುಬಿಟ್ಟ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ