ಸ್ಟೇಟಸ್ ಕತೆಗಳು (ಭಾಗ ೫೫) - ಉರ್ಮಿಳೆ

ಸ್ಟೇಟಸ್ ಕತೆಗಳು (ಭಾಗ ೫೫) - ಉರ್ಮಿಳೆ

ಕಥನವಾಗಿಸುವಾಗ ಆಕೆ ಅಕ್ಷರದೊಳಗೆ ಕಾಣಲಿಲ್ಲ. ಕಾವ್ಯ ಮೆರೆಯುವಾಗ ಆಕೆಯ ಸ್ವರ  ಕೇಳಲೇ ಇಲ್ಲ. ಆಕೆ ಮೂಲೆಗುಂಪಾದವಳು. ತವರು ಮನೆ ತೊರೆದು ಬಂದು ತನ್ನ ಗಂಡನೊಂದಿಗೆ ಬಾಳಬೇಕೆಂದು ಕನಸು ಕಂಡವಳಿಗೆ ಗಂಡ ತನ್ನ ಅಣ್ಣನೊಂದಿಗೆ ಹೊರಟು ನಿಂತಾಗ ಉಂಟಾದ ಶೂನ್ಯತೆಯನ್ನು ಯಾರೂ ಚಿತ್ರಿಸಲಿಲ್ಲ. 14 ವರ್ಷವೂ ಆತನ ಎದುರಾಗುವಿಕೆಗೆ ಕಾದವಳು. ಕೊನೆಗೆ ಮಹಾಪತಿವ್ರತೆ ಅನ್ನಿಸಿಕೊಳ್ಳಲಿಲ್ಲ .ದಿನವೂ ಹಣ್ಣು-ಹಂಪಲು ತಿಂದು ತಪಸ್ಸಿನಂತೆ ಕಾದವಳ ಕಣ್ಣೀರು ಬರವಣಿಗೆ ಆಗಲೇ ಇಲ್ಲ. ಕಷ್ಟ ಸುಖ, ನೋವು, ನಲಿವು ಏನನ್ನಾದರೂ ಹಂಚಿಕೊಳ್ಳೋಕೆ ತನ್ನ ಇನಿಯ ಪಕ್ಕದಲ್ಲಿ ಇಲ್ಲದಕ್ಕೆ ವ್ಯಥೆ ಮಾಡಿ ಜೀವ ಕಳೆದುಕೊಳ್ಳಲಿಲ್ಲ. ನಂಬಿಕೆ ಇಟ್ಟು ಕಾದಳು. ಆ ದಿನ ಬಂದಿತು. ತನ್ನ ಗಂಡನ ಅಣ್ಣನ ಪಟ್ಟಾಭಿಷೇಕದಲ್ಲಿ ಕರತಾಡನ ಜೈಕಾರ ಸಂಭ್ರಮಗಳ ನಡುವೆ ನನ್ನವನ ಪಕ್ಕದಲ್ಲಿ ನಿಲ್ಲುವ ಅವಕಾಶವೂ ಸಿಗಲಿಲ್ಲ. ತನ್ನವನ ನನ್ನ ಕೂಗಿ ಕರೆದರೂ ಸಡಗರದ ನಡುವೆ ಮಾತು ಕೇಳಲೇ ಇಲ್ಲ. 14 ವರ್ಷದ ನಿಜದ ವನವಾಸ ಅನುಭವಿಸಿದವಳು ಅವಳು. ಅಲ್ಲೇ ಮೂಲೆಗುಂಪಾದಳು. ನಿಜದ ಪತಿವ್ರತೆಯೇ ಅಲ್ವಾ?...

-ಧೀರಜ್ ಬೆಳ್ಳಾರೆ 

ಇಂಟರ್ನೆಟ್ ಚಿತ್ರ ಕೃಪೆ