ಸ್ಟೇಟಸ್ ಕತೆಗಳು (ಭಾಗ ೫೬೭) - ಸರ್ಕಸ್

ಸ್ಟೇಟಸ್ ಕತೆಗಳು (ಭಾಗ ೫೬೭) - ಸರ್ಕಸ್

ಸೈಕಲ್ ನ ಚಕ್ರ ತಿರುಗಿಸಿಕೊಂಡು ಒಂದೂರಿನಿಂದ ಇನ್ನೊಂದು ಊರಿಗೆ ತಲುಪುದನ್ನ ಕೇಳಿದ್ದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ಎಂಟು ದಿವಸಗಳಿಂದ ಅಲ್ಲೇ ಸುತ್ತುತ್ತಿದೆ. ಎಂಟು ದಿನಗಳಷ್ಟೇ ಈ ಊರಿನಲ್ಲಿ ಅವರ ಬದುಕು, ಸೈಕಲ್ ಚಕ್ರ ತಿರುಗ್ಬೇಕು ನೋಡಿದವರ ಕಣ್ಣು ಖುಷಿಪಡಬೇಕು ಕಿಸೆಯಿಂದ ಹಣ ಒಂದಷ್ಟಾದರು ಇವರಿಗೆ ಸಿಗಬೇಕು ಹಾಗಾದರೆ ಇವರ ಬದುಕು ನಡೆಯುತ್ತೆ ನೋಡಿ ಸಂಭ್ರಮ ಪಟ್ಟು, ಚಪ್ಪಾಳೆ ಕೊಟ್ಟು ಅಭಿನಂದನೆಗಳನ್ನು ತಿಳಿಸಿ ಹೊರಡುವವರೆ ಹೆಚ್ಚಾಗಿರುವಾಗ ಹೊಟ್ಟೆಯಾದರೂ ತುಂಬುವುದು ಹೇಗೆ? ಇಲ್ಲಿ ಸೈಕಲನ್ನು ಸಮತೋಲನದಿಂದ ಚಲಾಯಿಸಬೇಕು ಒಂದಿನಿತು ಹೆಜ್ಜೆ ತಪ್ಪಿದರೂ ಬದುಕು ನಷ್ಟವಾಗುತ್ತದೆ. ಬದುಕಿನ ತಕ್ಕಡಿಯ ಹೆಣಗಾಟಕ್ಕೆ ಕಾಲು ಪೆಡಲ್ ತುಳಿಯುತ್ತಿದೆ. ಹೊಸ ಜನ ಹೊಸ ಊರು ಹೊಸ ಬಾಂಧವ್ಯಗಳು ಬದುಕಿನಲ್ಲೇನು ಅಂತಹ ಅದ್ಭುತಗಳು ಘಟಿಸುತ್ತಿಲ್ಲ. ಎಲ್ಲರಿಗೂ ಅವರದ್ದೇ ಬದುಕಿದೆ. ಈ ಸೈಕಲ್ ತುಳಿಯುತ್ತಿರುವ ಕಾಲಿನ ಹಿಂದಿನ ಬದುಕು, ಮನೆಯಲ್ಲಿ ಕಾಯುತ್ತಿರೋ ಮಗ, ಈ ತಿಂಗಳು ಅಪ್ಪ ಕೊಡುವ ದುಡ್ಡಿನಿಂದ ಶಾಲೆಗೆ ಹಣ ಕಟ್ಟಬಹುದು, ಅಮ್ಮನ ಮದ್ದಿಗೆ ಒಂದಷ್ಟು ಉಪಕಾರ ಆಗಬಹುದು, ಪ್ರತಿದಿನ ಕುಡಿಯುವ ಚಹದಲ್ಲಿದ್ದ ನೀರಿನ ಅಂಶ ಖಾಲಿಯಾಗಿ ಒಂದಷ್ಟು ಸಕ್ಕರೆ ಚಹಾ ಹುಡಿ ಸೇರಿಕೊಳ್ಳಬಹುದು, ರಾತ್ರಿ ಹೊಟ್ಟೆಗೆ ಸೇರುವ ಬರಿ ನೀರಿನ ಬದಲು ಒಂದೆರಡು ಅಗುಳು ಅನ್ನ ಸೇರಬಹುದು. ಎಲ್ಲ ಯೋಚನೆಗಳು ಮನೆಯೊಳಗೆ ಕಾಯುತ್ತಿದ್ದಾವೆ. ಎಡಬಿಡದೆ ನಿರಂತರವಾಗಿ ಆ ಹೊಟ್ಟೆಗಳ ತಣಿಯುವಿಕೆಗೆ ಇಲ್ಲಿ ಕಾಲು ಪೆಡಲ್ ತುಡಿಯುತ್ತಿದೆ. ಕಾಲದ ಚಕ್ರದ ಹಾಗೆ ಈ ಚಕ್ರವೂ ಉರುಳುತ್ತಿದೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ