ಸ್ಟೇಟಸ್ ಕತೆಗಳು (ಭಾಗ ೫೬) - ನಮಗೂ ಬದುಕಿದೆ
ನೀವು ಆ ಜಾಗದಲ್ಲಿ ನಿಂತು ಯೋಚನೆ ಮಾಡ್ಲೇ ಇಲ್ಲ ಅಲ್ವಾ. ಎಲ್ಲರ ಜೊತೆ ನಂದು ಒಂದು ಇರಲಿ ಅಂತ. ಗಂಡು ಅನ್ನೋನು ತಪ್ಪು ಮಾಡೋದಕ್ಕೆ ಇರೋನು ಅನ್ನೋದು ನಿಮ್ಮ ವಾದಾನ?. ನನ್ನ ತಪ್ಪೇ ಇಲ್ಲದಿದ್ದರೂ ಅವಳು ಕೇಳ್ತಾ ಇಲ್ಲ. ಎಲ್ಲಾ ಹೊಡೆತವನ್ನು ತಿಂದೆ. ನಾನು ತಿರುಗಿ ಒಂದೇ ಒಂದು ಹೊಡೆಯಲಿಲ್ಲ, ಏಕೆಂದರೆ ಅದು ನನ್ನ ಸಂಸ್ಕೃತಿಯಲ್ಲ. ಮಾರ್ಗ ಮಧ್ಯ ಎಳೆದಾಡಿದಳು, ನೋಡಿದವರು ಹಲವರು ವಿಡಿಯೋ ಮಾಡಿದವರು ಇನ್ನು ಕೆಲವರು. ಅವಳಿಗೆ ಶಹಬ್ಬಾಸ್ ಎಂದು ಎಲ್ಲಾ ಕಡೆ ಹರಿಯಬಿಟ್ಟರು. ನನ್ನ ಮನೇಲಿ ಅಪ್ಪ ಅಮ್ಮ ಹೆಂಡತಿ ಮಗು ಅವರ ಮನಸ್ಸಿನ ಸ್ಥಿತಿಯನ್ನು ನೀವು ಒಮ್ಮೆಯಾದರೂ ಯೋಚಿಸಿದ್ದೀರಾ. ಮಗಳು ಕೇಳಿದಳು "ಅಪ್ಪ ನಿನಗ್ಯಾಕ ಅವರು ಹೊಡುದ್ರು? ನೀನು ತಪ್ಪು ಮಾಡದೇ ಇದ್ದರೂ ಸುತ್ತಮುತ್ತಲಿನವರು ಯಾಕೆ ಸುಮ್ಮನೆ ನೋಡುತ್ತಾ ನಿಂತಿದ್ದಾರೆ?"ಅಂತ. ನನ್ನಲ್ಲಿ ಉತ್ತರ ಇಲ್ಲ. ನಿಮಗೆ ತಪ್ಪಿನ ಅರಿವಾಗುವಾಗ ನಾನು ಸಾರ್ವಜನಿಕವಾಗಿ ಮಾನಹಾನಿ ಅನುಭವಿಸಿದ್ದೇನೆ. ನಾನು ಸ್ತ್ರೀ ದ್ವೇಷಿಯಲ್ಲ. ನನ್ನ ಜಾಗದಲ್ಲಿ ನಿಂತು ಒಮ್ಮೆ ಯೋಚಿಸಿದ್ದರೆ ನಿಮಗೆ ತಿಳಿಯುತ್ತಿತ್ತು. ನಾನು ಬೇಡಿಕೊಂಡೆ," ನಾನು ಬಡವ ತಪ್ಪು ಮಾಡಿಲ್ಲಾ" ನಿಮಗೆ ನನ್ನಲ್ಲಿ ಪ್ರಾಮಾಣಿಕತೆ ಕಾಣಲೇ ಇಲ್ಲ. ಸಹಾಯ ಮಾಡುವ ಹಲವರು ಅವಳಿಗೆ ಬೆನ್ನೆಲುಬಾಗಿದ್ದರು. "ಹು ಇಂಥವರಿಗೆ ಹೀಗೇ ಮಾಡ್ಬೇಕು" ಅನ್ನುವ ಮಾತು ಬೇರೆ. ನನಗಾದ ಮನಸ್ಸಿನ ಗಾಯಕ್ಕೆ ನೀವು ಮದ್ದು ಅರೆಯುತ್ತೀರಾ?. ನನ್ನ ಮಗುವಿನ ನೋವಿಗೆ ನೀವು ಸಾಂತ್ವನ ಹೇಳುತ್ತೀರಾ? ನಿಮ್ಮ ಪೌರುಷಕ್ಕೆ ಅಮಾಯಕರು ಬಲಿಯಾಗಬೇಕಾ? ಆ CCTV ಇಲ್ಲದಿದ್ದರೆ ನಾನು ಜೀವನ ಪೂರ್ತಿ ತಪ್ಪಿತಸ್ಥನಾಗಿಯೇ ಬದುಕಬೇಕಿತ್ತು. ಕೈಯೆತ್ತುವ ಮುನ್ನ ಒಮ್ಮೆ ಯೋಚಿಸಿ ನನಗೂ ಬದುಕಿದೆ…
-ಧೀರಜ್ ಬೆಳ್ಳಾರೆ
ಇಂಟರ್ನೆಟ್ ಚಿತ್ರ