ಸ್ಟೇಟಸ್ ಕತೆಗಳು (ಭಾಗ ೫೭೦) - ಖಾಲೀ ಜಾಗ

ಸ್ಟೇಟಸ್ ಕತೆಗಳು (ಭಾಗ ೫೭೦) - ಖಾಲೀ ಜಾಗ

ಅಲ್ಲೊಂದು ಖಾಲಿ ಜಾಗ ಮಾರಾಟಕ್ಕಿದೆ. ಇಲ್ಲಾ ಆ ಜಾಗವನ್ನ ಯಾರು ಮಾರೋದಿಲ್ಲ ಅಂತ ಅನ್ಸುತ್ತೆ, ಅಲ್ಲಾ ಅಲ್ಲಾ ಅದು ಮಾರಾಟಕ್ಕೆ ಯೋಗ್ಯವಲ್ಲ ಅಂತ ಅನ್ಸುತ್ತೆ, ಆ ಖಾಲಿ ಜಾಗದಲ್ಲಿ ಏನು ಬೆಳೆದೇ ಇಲ್ಲ, ಇಷ್ಟು ದಿನ ಖಾಲಿಯಾಗಿದ್ರು ಅದನ್ನ ಯಾಕೆ ಯಾರು ಒತ್ತುವರಿ ಮಾಡಿಕೊಂಡಿಲ್ಲ, ಒಂದು ಚಂದದ ಕಟ್ಟಡ ಕಟ್ಟಿ ಯಾರಿಗಾದರೂ ಬಾಡಿಗೆ ಕೊಡಬಹುದಿತ್ತು, ಉದ್ಯಾನವನ ಕಟ್ಟಿ ಪಕ್ಷಿಗಳಿಗೆ ಆಶ್ರಯ ನೀಡಬಹುದಿತ್ತು. ಬಸ್ ನಿಲ್ದಾಣ ಮಾಡಬಹುದಿತ್ತು, ಅಂಗಡಿ ಹೋಟೆಲ್ ಏನಾದ್ರೂ ಮಾಡಬಹುದು, ಯಾಕೆ ಆ ಖಾಲಿ ಜಾಗ ಹಾಗೆ ಉಳಿದುಬಿಟ್ಟಿದೆ. ಯಾರು ಗಮನ ಹರಿಸಲಿಲ್ವೋ ಅಥವಾ ಯಾರಿಗೂ ಆ ಜಾಗದ ಬಗ್ಗೆ ಯೋಚನೆ ಇಲ್ಲವೋ ಅಥವಾ ಯಾರಿಗೂ ಗೊತ್ತಿಲ್ವೋ?, ನೋಡುವಾಗ ಖಾಲಿಯಾಗಿ ಕಾಣುತ್ತಿದೆ, ಇದು ಒಳಗಿನ ಖಾಲಿಯೊ ಹೊರಗಿನ ಖಾಲಿಯೊ ಗೊತ್ತಿಲ್ಲ. ಅಲ್ಲಿ ಏನೋ ತುಂಬಿಸಬೇಕು ಆದರೆ ಏನು ತುಂಬಿಸಬೇಕು ಅನ್ನೋದು ನನಗೆ ಗೊತ್ತಾಗ್ತಾ ಇಲ್ಲ. ನನಗಂತೂ ಈ ಜಾಗ ತುಂಬಾ ಆಪ್ತವಾಗಿರೋದು, ನನಗೆ ಪರಿಚಯ ಇರೋದು. ನಿಮಗೆ ಇದು ಖಾಲಿಯಾಗಿಲ್ಲ ಅಂತ ಅನಿಸಬಹುದು, ಆದರೆ ನನಗೆ ಅದು ಖಾಲಿಯಾಗಿ ಕಾಣುತ್ತಿದೆ. ಖಾಲಿಯಾಗಿರುವುದನ್ನ ತುಂಬಿಸಬೇಕಾಗಿರುವುದು ನನ್ನ ಜವಾಬ್ದಾರಿ ನಿಮ್ಮೊಳಗೂ ನಿಮಗೆ ಗೊತ್ತಿರುವ ಕಡೆಯೂ ಈ ತರಹದ ಖಾಲಿ ಜಾಗಗಳು ತುಂಬಾ ಸಿಗಬಹುದು ಅದರೊಳಗೆ ಏನು ತುಂಬಬೇಕು ಏನು ಬೆಳಿಬೇಕು ಏನು ಬೆಳೆದರೆ ಮುಂದೆ ಅದರಿಂದ ಏನು ಫಲ ಸಿಗುತ್ತೆ ಅನ್ನೋದು ನಿಮಗೆ ಗೊತ್ತಿರಬೇಕು ಹಾಗೆ ನನಗೀಗ ಸದ್ಯ ಕಣ್ಣಮುಂದಿರುವ ಪ್ರಶ್ನೆ ಈ ಖಾಲಿ ಜಾಗದಲ್ಲಿ ಏನು ಬೆಳೆಯಬೇಕು ಅನ್ನೋದು ಹಾಗಾಗಿ ಬೀಜಗಳನ್ನ ಹುಡುಕ್ತಾ ಇದ್ದೇನೆ. ಈ ಖಾಲಿ ಜಾಗದಲ್ಲಿ ಸೂಕ್ತವಾಗಿ ಬೆಳೆದು ಹೆಮ್ಮರವಾಗಿ ನಿಲ್ಲುವಂತೆ ಅದ್ಭುತ ಯೋಚನೆಯೊಂದನ್ನು ಹುಡುಕುತ್ತಿದ್ದೇನೆ, ಅದರಿಂದ ಖಾಲಿ ಜಾಗ ವ್ಯರ್ಥವಾಗಿ ಹೋಗೋ ಮೊದಲು ಹಸಿರು ತುಂಬಬೇಕು. ನಿಮ್ಮೊಳಗೂ ಖಾಲಿ ಜಾಗವಿದ್ದರೆ ಮೊದಲು ತುಂಬಿಸಿ ಬಿಡಿ ವ್ಯರ್ಥವಾಗಿ ಉಸಿರು ನಿಲ್ಲುವ ಮೊದಲು....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ