ಸ್ಟೇಟಸ್ ಕತೆಗಳು (ಭಾಗ ೫೭೪) - ಬಲ್ಬ್
ಅಪ್ಪ ನನಗೆ ಯಾಕೆ ಏನೂ ಒಳ್ಳೆದೇ ಆಗ್ತಾಯಿಲ್ಲ? ನಾನು ಇಷ್ಟೇ ಬದಲಾದರೂ ಜನ ನನ್ನ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿಲ್ಲ? ನಾನು ಹೊಸತೇನೇ ಕೆಲಸ ಮಾಡುದ್ರು ಜನ ನನ್ನ ಹತ್ತಿರ ಬರ್ತಾ ಇಲ್ಲ ? ನನ್ನನ್ನ ನಂಬ್ತಾ ಇಲ್ಲ ? ನಾನು ಮೊದಲು ಎಷ್ಟು ಪರಿಶುದ್ಧನಾಗಿದ್ದೇನೋ ಈಗಲೂ ಅಷ್ಟೇ ಪರಿಶುದ್ಧನಾಗಿದ್ದೇನೆ. ಅಷ್ಟೇ ಅದ್ಭುತ ಶಕ್ತಿಗಳು ನನ್ನತ್ರ ಇದಾವೆ. ತುಂಬಾ ಚೆನ್ನಾಗಿ ಯೋಚನೆ ಮಾಡುತ್ತೇನೆ, ಕೆಲಸಾನೂ ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಹಾಗಿದ್ರೂ ಜನ ನನ್ನನ್ನ ನಂಬ್ತಾ ಇಲ್ಲ ಯಾಕೆ ಹೀಗೆ ? ಪ್ರಶ್ನೆಯನ್ನು ಅಪ್ಪನ ಬಳಿ ಒಂದು ವಾರದಿಂದ ಕೇಳ್ತಾ ಇದ್ದೇನೆ. ಅವರದ್ದು ಉತ್ತರ ಇಲ್ಲ. ಅವತ್ತು ಭಾನುವಾರ ನನಗೆ ಉತ್ತರ ಬೇಕು ಅಂತಾನೆ ಅವರನ್ನು ನಿಲ್ಲಿಸಿ ಕೇಳಿದೆ ಅದಕ್ಕೆ ಅವರು ಹೇಳಿದರು "ಇಷ್ಟು ದಿನ ಆದ್ರೂ ನಿನ್ನ ಪ್ರಶ್ನೆಗೆ ನೀನೆ ಉತ್ತರ ಕಂಡುಕೊಳ್ಳುತ್ತೀಯಾ ಅಂತ ನಾನು ಅಂದುಕೊಂಡಿದ್ದೆ. ಆದರೆ ಇವತ್ತು ಹೇಳುತ್ತೇನೆ ಕೇಳು ಆ ಅಡಿಗೆ ಕೋಣೆಯಲ್ಲಿರುವ ಬಲ್ಬ್ ತಗೊಂಡು ಬಾ" ಅದು ಪೂರ್ತಿ ಕಪ್ಪಾಗಿತ್ತು. "ಮೊದಲದನ್ನ ಚೆನ್ನಾಗಿ ಒರೆಸಿ ಮತ್ತೆ ಅದೇ ಹೋಲ್ಡರಿಗೆ ಹಾಕು" ಅಡುಗೆ ಕೋಣೆ ತುಂಬಾ ಚೆನ್ನಾಗಿ ಬೆಳಕಾಯಿತು. "ಆಗಬೇಕಾಗಿರೋದು ಇಷ್ಟೇ ಕಲ್ಮಶಗಳು, ಒಂದಷ್ಟು ಬೇರೆಬೇರೆ ವಿಚಾರಗಳು, ಅನಗತ್ಯ ಯೋಚನೆಗಳು, ಸಂಬಂಧ ಇಲ್ಲದ ಗೆಳೆಯರು, ಅಗತ್ಯವಿಲ್ಲದ ಕೆಲಸಗಳು ಹೀಗಾದಾಗ ನಿನ್ನೊಳಗಿನ ಶಕ್ತಿ ಹೇಗೆ ಕಾಣೋದು? ಹೇಗೆ ಆ ಬಲ್ಬನ್ನ ಸ್ವಚ್ಛಗೊಳಿಸಿದ ಹಾಗೆ ನಿನ್ನನ್ನು ಸ್ವಚ್ಛಗೊಳಿಸುವ ಅವಶ್ಯಕತೆ ಇದೆ. ಇಷ್ಟು ದಿನ ಬಲ್ಬ್ ಕ್ಲೀನ್ ಮಾಡ್ತಾ ಇದ್ದ ನನಗೆ ಅರ್ಥನೇ ಆಗಿರಲಿಲ್ಲ ಅದನ್ನು ಹೇಳುವುದಕ್ಕೆ ಅಪ್ಪನೇ ಬರಬೇಕಾಯಿತು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ