ಸ್ಟೇಟಸ್ ಕತೆಗಳು (ಭಾಗ ೫೭೫) - ತ್ರಿಶಾ
ಬೀಜ ಬಿತ್ತುವವನಿಗೆ ನಂಬಿಕೆ ಇತ್ತು. ಇದೊಂದು ಹೆಮ್ಮೆರವಾಗುತ್ತೆ, ಇದರಿಂದ ಇನ್ನೊಂದಷ್ಟು ಹೊಸ ಮರಗಳು ಹುಟ್ಟುತ್ತವೆ, ಊರಿಂದ ಊರಿಗೆ ಈ ಮರದ ಸತ್ವಗಳು ಹರಡುತ್ತೆ, ಇದು ಸಮಾಜಕ್ಕೆ ನೆರಳಾಗಿರುತ್ತೆ ಅಂತ. ಆದರೆ ನೋಡಿದವರು ಸಾವಿರ ಮಾತಾಡಿದ್ರು. ಇವನಿಗೆ ಬೇರೆ ಕೆಲಸ ಇಲ್ಲ. ನಾಲ್ಕು ದಿನ ಈ ಕೆಲಸ ಮಾಡುತ್ತಾನೆ ಮತ್ತೆ ಹೊಸತೊಂದು ಕೆಲಸದ ಕಡೆಗೆ ಹೋಗುತ್ತಾನೆ. ಅವನು ಅವತ್ತು ಬೀಜ ನೆಟ್ಟಾಗ ಅವನಿಗೆ ಗೊತ್ತಿತ್ತು ದಾಹವನ್ನ ತೀರಿಸುವ ಜ್ಞಾನವನ್ನು ತಾನು ಜಗತ್ತಿಗೆ ನೀಡಬೇಕು ಅಂತ. ಸಣ್ಣ ಗಿಡವಿದ್ದದ್ದು ಮರವಾಗುವ ಹಂತಕ್ಕೆ ಬಂತು. ಆ ಮರಕ್ಕೆ ಇನ್ನೊಂದಷ್ಟು ಹೊಸ ಬಳ್ಳಿಗಳನ್ನು ಸೇರಿಸಿ ಇನ್ನೊಂದಷ್ಟು ಹೊಸ ತರದ ಹಣ್ಣು ಹೂಗಳಿಗೆ ಆಶ್ರಯ ನೀಡಿದ. ಊರಲ್ಲಿ ಬೆಳೆಯುತ್ತಿದ್ದ ಮರ ತನ್ನೂರನ್ನು ಸೇರಿಸಿಕೊಂಡು ಇನ್ನೊಂದೆರಡು ಊರುಗಳಿಗೂ ಹೋಗಿ ಅಲ್ಲೂ ಮರವಾಗುವ ಸೂಚನೆಯನ್ನು ನೀಡಿತು. ಆ ಮರದಲ್ಲಿ ಒಂದೇ ತರಹದ ಹಣ್ಣು ಸಿಗುತ್ತಾ ಇತ್ತು. ಆದರೆ ಅವನಿಗೆ ಗೊತ್ತಿತ್ತು ಒಂದೇ ತರದ ಹಣ್ಣನ್ನ ನೀಡುತ್ತಾ ಹೋದರೆ ತುಂಬ ದಿನ ಮರವನ್ನ ಯಾರು ನೆನಪು ಇಟ್ಟುಕೊಳ್ಳುವುದಿಲ್ಲ, ಅದಕ್ಕೋಸ್ಕರ ಆ ಮರಕ್ಕೆ ಕಸಿ ಮಾಡಿ ವಿಧವಿಧದ ಹಣ್ಣುಗಳನ್ನು ಬೆಳೆಯುವಂತೆ ಮಾಡಿ ಜನರಿಗೆ ಹಂಚುವುದಕ್ಕೆ ಆರಂಬಿಸಿದ. ಹಾಗೆ ಆತನಿಗೆ ಹೊಸತೇನನ್ನು ಮಾಡಬೇಕು ಅನ್ನುವಂತಹ ತುಡಿತ ಹೆಚ್ಚಾಗುತ್ತಾನೆ ಹೋಯ್ತು. ಮರ ಒಂದು ಸಮಾಜಕ್ಕೆ ನೆರಳು ನೀಡುವುದಲ್ಲ, ಇಂತಹ ಹಲವಾರು ಮರಗಳು ಪ್ರತಿಯೊಂದು ಊರುಗಳಲ್ಲಿ ಬೆಳೆಯಬೇಕು. ಒಂದಷ್ಟು ಜನ ಜೊತೆ ಸೇರಿ ಗೊಬ್ಬರ ನೀರುಗಳನ್ನು ಹಾಕುತ್ತಾ ಮರವನ್ನ ಬೆಳೆಸುವುದರ ಕಡೆಗೆ ಪರಿಶ್ರಮವಹಿಸಿದರು. ಕೆಲವೊಂದಷ್ಟು ಜನ ರೆಂಬೆಕೊಂಬೆಗಳನ್ನ ಕತ್ತರಿಸಿ ತಮ್ಮ ಮನೆಗೆ ಕೊಂಡೊಯ್ದರು. ಅವನಿಗೆ ಬೇಜಾರಿಲ್ಲ. ಯಾಕೆಂದರೆ ಅವರ ಮನೆಯಲ್ಲಿ ಮರಗಳು ಬೆಳೆಯಲಿ ಅನ್ನೋದು ಇವನ ಆಶಯ. ಈಗ ಇನ್ನೊಂದಷ್ಟು ಹೊಸತರದ ಹೂವು ಹಣ್ಣುಗಳನ್ನು ನೀಡುವುದಕ್ಕೆ ಹೊಸ ಕಸಿ ಪ್ರಕ್ರಿಯೆಯನ್ನು ಆರಂಭಿಸಿದ್ದಾನೆ. ಆ ಮರ ಬೆಳೆಯುತ್ತಿದೆ. ಸಮಾಜಕ್ಕೆ ನೆರಳು ನೀಡುವ ಕೆಲಸದ ಜೊತೆಗೆ ಸಮಾಜ ಬದಲಾವಣೆ ಕೆಲಸವನ್ನು ಮಾಡ್ತಾ ಇದೆ. ಈ ನೆರಳಿನಿಂದ ಆಶ್ರಯ ಪಡೆದ ಹಲವಾರು ಹೂವು ಹಣ್ಣುಗಳು ತಾವು ಚಲಿಸಿದ ಕಡೆಗಳಲ್ಲಿ ಸಣ್ಣಪುಟ್ಟ ಗಿಡಗಳನ್ನು ಹಾಕುತ್ತಾ ಬೆಳೆಯುತ್ತಿದ್ದಾವೆ. ಅದು ಆತನಿಗೆ ಖುಷಿ ತಂದಿದೆ. ಹಾಗಾಗಿ ಆತ ಅಂದು ನೆಟ್ಟ ತ್ರಿಶಾ ಅನ್ನುವಂತಹ ಗಿಡ ಸಂವತ್ಸರಗಳನ್ನ ದಾಟುತ್ತಾ ದಾಟುತ್ತಾ ಬೃಹದಾಕಾರವಾದ ಮರವಾಗುವ ಎಲ್ಲ ಸೂಚನೆಯನ್ನು ನೀಡುತ್ತಿದೆ. ಸಾದ್ಯವಾದರೆ ಮರವನ್ನ ದೂರದಿಂದ ನಿಂತು ಗಮನಿಸಬೇಕು, ಒಂದಷ್ಟು ನೀರು ಗೊಬ್ಬರಗಳನ್ನು ಹಾಕಿ ಸಲಹೆ ಬೇಕು ಅಥವಾ ತಾವೇ ಒಂದು ಹೊಸ ಬೀಜವನ್ನು ಹಾಕಿ ಮರವಾಗಿ ಬೆಳೆಸುವವರೆಗೂ ಕಾಯಬೇಕು. ಆದರೆ ತೊಂದರೆ ನೀಡುವ ಪ್ರಕ್ರಿಯೆ ಮಾತ್ರ ಆಗಬಾರದು. ನಾನು ಆ ಮರದಿಂದ ಆಶ್ರಯ ಪಡೆದಿದ್ದೇನೆ, ಮರವನ್ನ ಬೆಳೆಸುವುದರ ಕಡೆಗೆ ದುಡಿತಾ ಇದ್ದೇನೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ