ಸ್ಟೇಟಸ್ ಕತೆಗಳು (ಭಾಗ ೫೭೬) - ಚುರುಮುರಿ
ದೇಹ ಸಹಕರಿಸುತ್ತಿಲ್ಲ, ಕೈಕಾಲುಗಳು ಗಟ್ಟಿಯಾಗಿ ನೆಲದ ಮೇಲೆ ನಿಲ್ಲುತ್ತಿಲ್ಲ. ಆದರೂ ಆಕೆ ದುಡಿಯುತ್ತಿದ್ದಾಳೆ. ಗಂಟೆ ಮಧ್ಯರಾತ್ರಿಯನ್ನ ದಾಟಿಕೊಂಡು ಬೆಳಗಿನ ಕಡೆಗೆ ಸಾಗುತ್ತಿದೆ. ಚಂದ್ರನ ಕೆಲಸ ಮುಗಿಸಿ ಸೂರ್ಯ ನಿದ್ದೆಯಿಂದ ಏಳುವ ಸಮಯ. ಆ ಊರ ಜಾತ್ರೆಯಲ್ಲಿ ಆಕೆ ಚುರುಮುರಿ ಮಾರಾಟ ಮಾಡುತ್ತಿದ್ದಾಳೆ. ಆಕೆ ಕೂಗಿದ ದನಿ ಆಕೆಯ ಮುಂದೆ ನಿಂತ ಗಿರಾಕಿಗಳಿಗೆ ಕೇಳುತ್ತಿಲ್ಲ, ಆದರೂ ದೇಹಕ್ಕೆ ಪ್ರಾಣ ತೆಗೆದುಕೊಂಡು ಆಕೆ ಕೂಗುತ್ತಿದ್ದಾಳೆ. "ಚುರುಮುರಿ ಬನ್ನಿ, ಅಣ್ಣ ಚುರುಮುರಿ" ಈ ವಯಸ್ಸಿನಲ್ಲಿ ದುಡಿಯುವ ಅವಶ್ಯಕತೆ ಏನು? ಬೆಳಗಿನ ಹೊತ್ತು ಯಾವುದೋ ಮನೆ ಕೆಲಸಕ್ಕೋ ಹೋದರೆ ಒಂದಷ್ಟು ಸಂಪಾದನೆ ಸಾಕಾಗೋದಿಲ್ವಾ? ಸಂಪಾದನೆ ಸಾಕಾಗುತ್ತೆ ಬದುಕು ಅವಳದ್ದು ಸಾಗುತ್ತೆ, ಆದರೆ ಕೈಹಿಡಿದವನ ಅನಾರೋಗ್ಯ ಹುಟ್ಟಿಸಿದ ಮಕ್ಕಳ ಗೈರುಹಾಜರಿ ಆಕೆಯನ್ನು ಕಾಡುತ್ತಿದೆ. ಅವರು ಪ್ರೀತಿಸಿ ಮದುವೆಯಾದವರು. ಕೊನೆಯವರೆಗೂ ಜೊತೆಯಲ್ಲಿ ಇರಬೇಕಲ್ಲ! ಮದ್ದಿಗೊಂದಿಷ್ಟು ಖರ್ಚು ಬರುತ್ತಾ ಇರುತ್ತದೆ. ಅದನ್ನು ಸರಿದೂಗಿಸುವುದಕ್ಕೆ ರಾತ್ರಿ ಹಗಲೆಂದು ದುಡಿತಾ ಇರುತ್ತಾಳೆ. ಆತನಿಗೆ ಸಮಯಕ್ಕೆ ಸರಿಯಾಗಿ ಮದ್ದುಗಳನ್ನು ಕೊಡುವುದಕ್ಕೆ ಈ ದಿನದ ಒಟ್ಟು ಭತ್ಯೆಗೆ ಇನ್ನೂ ಹತ್ತು ರೂಪಾಯಿ ಕಡಿಮೆ ಇದೆ. ಮತ್ತೆ ಜೋರಿನಿಂದ ಕೂಗುತ್ತಿದ್ದಾಳೆ. "ಚುರುಮುರಿ ಅಣ್ಣ ಚುರುಮುರಿ...."
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ