ಸ್ಟೇಟಸ್ ಕತೆಗಳು (ಭಾಗ ೫೮೨) - ಸೌಂಡ್ ಬಾಕ್ಸ್
ನನಗೆ ಈಗೀಗ ಸರಿಯಾಗಿ ಅರ್ಥವಾಗ್ತಾ ಇಲ್ಲ. ನಾನು ಹುಟ್ಟಿರುವುದರ ಕಾರಣ ಏನು? ಇನ್ನೊಬ್ಬರಿಗೆ ತೊಂದರೆ ಕೊಡೋದಕ್ಕಂತೂ ಅಲ್ಲವೇ ಅಲ್ಲ ಅಂದುಕೊಳ್ಳುತ್ತೇನೆ. ನನ್ನನ್ನ ಹುಟ್ಟಿಸಿದವ ನನ್ನ ಹುಟ್ಟಿಗೆ ಒಂದು ಬಲವಾದ ಕಾರಣ ನೀಡಿದ್ದಾನೆ. ಜನ ತುಂಬಾ ಸೇರಿದಾಗ ಎದುರಲ್ಲಿ ನಿಂತವನ ಮಾತು ಜನರ ಮನಸ್ಸಿಗೆ ತಲುಪುವುದಿಲ್ಲ. ಕಿವಿಗೆ ಕೇಳುವುದಿಲ್ಲ ಅಂತದಾಗ ನಾನು ಬೇಕೇ ಬೇಕು. ನನ್ನದು ಮೂಲ ಉದ್ದೇಶ ಇದೆ. ಆದರೆ ಇತ್ತೀಚಿಗೆ ಕಾರ್ಯಕ್ರಮಗಳಲ್ಲಿ ಜನರ ಕಿವಿ ತಮಟೆಯ ಒಡೆದು ಹೋಗುವಷ್ಟು ಜೋರಾಗಿ ನನ್ನ ಶಬ್ದದ ಪ್ರಭಾವವನ್ನು ಹೆಚ್ಚಿಸಿರುತ್ತಾರೆ. ನಾನು ಕೇಳಿಕೊಳ್ಳುವುದಿಷ್ಟೇ. ನನಗೂ ಒಂದಷ್ಟು ಚೌಕಟ್ಟುಗಳಿವೆ. ನಾನು ಇಷ್ಟೇ ಜೋರಾಗಿ ಶಬ್ದಗಳನ್ನು ಪ್ರವಹಿಸಬೇಕು, ಜನರಿಗೆ ತಲುಪಿಸಬೇಕು. ನೀವು ಕಾರ್ಯಕ್ರಮಗಳಲ್ಲಿ ನನ್ನ ಸಾಮರ್ಥ್ಯಕ್ಕಿಂತ ಇನ್ನೂ ಒಂದು ತುಸು ಹೆಚ್ಚೇ ಶಬ್ದದ ಕಂಪನವನ್ನು ಹೆಚ್ಚಿಸಿಬಿಡ್ತೀರಿ. ಅದು ಅಲ್ಲಿ ಸುತ್ತಮುತ್ತ ಬದುಕುತ್ತಿರುವ ಹಲವಾರು ವೃದ್ಧರ,ಮಕ್ಕಳ, ರೋಗಿಗಳ ಮನಸ್ಸುಗಳಿಗೆ ತುಂಬಾ ನೋವನ್ನುಂಟು ಮಾಡುತ್ತದೆ. ಬದುಕು ಕಷ್ಟವೇನಿಸುತ್ತದೆ... ಜನ ನನ್ನನ್ನ ದೂರೋದ್ದಕ್ಕೆ ಆರಂಬಿಸುತ್ತಾರೆ. ತಪ್ಪು ನನ್ನದಲ್ಲದಿದ್ದರೂ ನಾನ್ಯಾಕೆ ಶಾಪ ತೆಗೆದುಕೊಳ್ಳಬೇಕು? ಸದ್ಯಕ್ಕೆ ಸ್ವಲ್ಪ ಶಬ್ದ ಕಡಿಮೆ ಮಾಡಿ ನನ್ನ ಎದೆ ಬಡಿತ ಹೆಚ್ಚಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ