ಸ್ಟೇಟಸ್ ಕತೆಗಳು (ಭಾಗ ೫೮೩) - ಮಾರಾಟ

ಸ್ಟೇಟಸ್ ಕತೆಗಳು (ಭಾಗ ೫೮೩) - ಮಾರಾಟ

ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಬೆಲೆ ನಿಗದಿ ಮಾಡಿದ್ದಾರೆ. ಪ್ರತಿಯೊಂದು ಖರೀದಿಸುವುದಕ್ಕೆ ಇಂತಿಷ್ಟು ಬೆಲೆ ನೀಡಿ ಖರೀದಿಸಬೇಕಾಗುತ್ತದೆ. ಕೆಲವೊಂದು ಸಲ ಒಂದೇ ತರದ ವಸ್ತುಗಳು ಸ್ಥಳ ಬದಲಾವಣೆಯಿಂದ ವ್ಯಕ್ತಿ ಬದಲಾವಣೆಯಿಂದ ವಾತಾವರಣ ಬದಲಾವಣೆಯಿಂದ ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಅದನ್ನು ಉತ್ಪಾದನೆ ಮಾಡುವವನಿಗೆ ಅಪ್ರತಿಮ ಲಾಭವಾಗುತ್ತದೆ. ಇಲ್ಲಿ ನನ್ನದೊಂದು ಬೇಡಿಕೆ, ಈ ಕಷ್ಟ ನೋವು ಸಂಕಟ ದುಃಖ ಎಲ್ಲ ಇದ್ದಾವಲ್ಲ ಇವುಗಳಿಗೆ ಕೂಡ ಒಂದಷ್ಟು ಬೆಲೆ ನಿಗದಿ ಮಾಡಿ ಒಂದಷ್ಟು ಜನ ಖರೀದಿಸುವ ಹಾಗಾದಾಗ ಆ ನೋವುಗಳನ್ನು ಅನುಭವಿಸಿದವರು ನಗುವಿನ ಕಡೆಗೆ ದಾರಿಯನ್ನ ಹುಡುಕಿಕೊಳ್ಳಬಹುದು. ಆ ಬೆಲೆಗಳನ್ನ ಯಾರು ಮಾರಾಟ ಮಾಡುತ್ತಾನೋ ಅವನ ಅಗತ್ಯಕ್ಕೆ ತಕ್ಕ ಹಾಗೆ ನಿರ್ಧರಿಸುವ ಹಾಗಾಗಲಿ. ಎಲ್ಲಾ ಸ್ಥಳಗಳಲ್ಲೂ ಅದು ದೊರಕುವಂತೆ ಆದರೆ ಕಣ್ಣೀರಿನ ಹನಿಗಳು ಕೆನ್ನೆಯ ಮೇಲೆ ಇಳಿದು ನೆಲವನ್ನು ತಲುಪುವುದು ತಪ್ಪುತ್ತದೆ. ಒಂದಷ್ಟು ಉಸಿರುಗಳು ನೆಮ್ಮದಿಯನ್ನು ಪಡೆದುಕೊಳ್ಳುತ್ತದೆ. ಹೃದಯ ನಿಧಾನವಾಗಿ ದಿನವೂ ಬಡಿವ ಹಾಗೆ ಬಡಿತದ ಎಲ್ಲ ಸಾಧ್ಯತೆಗಳು ಸಾಧ್ಯವಾಗಬಹುದು. ಸದ್ಯಕ್ಕೆ ತುಂಬಾ ಅವಶ್ಯಕತೆ ಇದೆ ನೀವು ತಿಳಿದವರು ದೊಡ್ಡವರು ನಿಮಗೆ ಯಾರಾದರೂ ಪರಿಚಯಸ್ಥರು ಇದ್ದರೆ ದಯವಿಟ್ಟು ನೋವನ್ನ ಖರೀದಿಸುವವರನ್ನು ತಿಳಿಸಿ. ತಮ್ಮಲ್ಲಿರುವ ಸರಕುಗಳನ್ನು ಮಾರಾಟ ಮಾಡಿ ಬದುಕನ್ನು ಬೆಳಗಿಸಿಕೊಳ್ಳಬಹುದು. ವಿಳಾಸ ತಿಳಿಸುವಿರೆಂದು ನಂಬಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ