ಸ್ಟೇಟಸ್ ಕತೆಗಳು (ಭಾಗ ೫೮೪) - ಗೊಂಬೆಗಳು
ಆ ಕೋಣೆಯೊಳಗೆ ತಯಾರಾಗುತ್ತಿದ್ದ ಬೇರೆ ಬೇರೆ ಬಣ್ಣದ ಬೇರೆ ಬೇರೆ ವಿಧದ ಗೊಂಬೆಗಳಿಗೆ ಸಂಭ್ರಮೋ ಸಂಭ್ರಮ. ಒಂದಷ್ಟು ಧೂಳುಗಳ ನಡುವೆ ದಿನವನ್ನು ಕಳೆದು ಕೆಲವೇ ದಿನಗಳಲ್ಲಿ ಮಾರಾಟ ಕೇಂದ್ರದಲ್ಲಿ ಜನರನ್ನ ಹತ್ತಿರ ಸೆಳೆಯುತ್ತೇವೆ, ಅವರು ಮನೆಗೆ ಕೊಂಡೊಯ್ದು ಮುದ್ದಿಸುತ್ತಾರೆ ಪ್ರೀತಿಸುತ್ತಾರೆ ಆಟವಾಡುತ್ತಾರೆ. ಇದೇ ತರದ ಆಲೋಚನೆ ಆ ಕೋಣೆಯ ಪಕ್ಕದ ಕೋಣೆಯಲ್ಲಿ ತಯಾರಾಗುತ್ತಿದ್ದ ಆಟಿಕೆಗಳಿಗೂ ಕೂಡಾ. ಎಲ್ಲವೂ ಮಾರುಕಟ್ಟೆಗೆ ಒಂದು ದಿನ ಬಂದು ನಿಂತವು. ಶಾಲೆಗೆ ರಜೆ ಘೋಷಿಸಿದರು ಮಕ್ಕಳು ಓಡೋಡಿ ಮನೆ ಕಡೆಗೆ ತೆರಳುತ್ತಿದ್ದ ಹಾಗೆ ಮನೆಯಲ್ಲಿ ಹೊಸ ವರಸೆ. ಮುಂದಿನ ವರ್ಷದ ಓದಿಗೆ ಪೂರಕವಾದ ಟ್ಯೂಷನ್ ತರಗತಿಗಳು ಆರಂಭವಾದವು. ಬೇಸಿಗೆ ಶಿಬಿರಗಳ ಹಾಡೋ ನೃತ್ಯ ಆಟ ಪಾಠಗಳನ್ನು ಕಳಿಸುವುದಕ್ಕೆ ಶಿಬಿರಗಳು ಬಾಯಿ ತೆಗೆದುಕೊಂಡವು. ಈ ದುಡ್ಡಿನ ದುನಿಯಾದ ನಡುವೆ ಪುಟ್ಟ ಮಕ್ಕಳ ಸಂಭ್ರಮವನ್ನು ಹೆಚ್ಚಿಸುವ ಆಟಿಕೆಗಳನ್ನು ಕೇಳುವವರಿಲ್ಲ. ಆಟಿಕೆಗಳಿಗೆ ತಮ್ಮ ಮೂಲ ಜಾಗವೇ ಖುಷಿಯ ಆವಾಸ ಸ್ಥಾನವಾಯಿತು, ದಾರಿ ಬದಿಯಲ್ಲಿ ತಮ್ಮನ್ನ ಮಾರಾಟ ಮಾಡಿಕೊಳ್ಳಲು ನಿಂತ ಆಟಿಕೆಗಳು ಗೊಂಬೆಗಳಿಗೆ ಮೊಬೈಲ್ ಹಿಡಿದು ಹೊರಟ ಮನಸ್ಸುಗಳನ್ನ ನೋಡಿ ತಮ್ಮ ಹುಟ್ಟು ನಿರರ್ಥಕ ಎನಿಸಲಾರಂಬಿಸಿತು. ಎಲ್ಲಾ ಬೊಂಬೆಗಳು ಊರು ಬಿಟ್ಟು ಇನ್ನೊಂದು ಊರಿಗೆ ಹೊರಟವು. ಅಲ್ಲಾದ್ರೂ ಪ್ರೀತಿಸುವ ಮಕ್ಕಳು ಆಟವಾಡುವ ಮಕ್ಕಳು ನಮ್ಮನ್ನ ಭೇಟಿಯಾಗಲಿ ಅನ್ನುವ ಕಾರಣಕ್ಕೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ