ಸ್ಟೇಟಸ್ ಕತೆಗಳು (ಭಾಗ ೫೮೬) - ಹೀಗೊಂದು ಜಾತ್ರೆ

ಸ್ಟೇಟಸ್ ಕತೆಗಳು (ಭಾಗ ೫೮೬) - ಹೀಗೊಂದು ಜಾತ್ರೆ

ಅದೊಂದು ಊರು ಅಲ್ಲಿ ಐದು ವರ್ಷಕ್ಕೊಂದು ಸಂಭ್ರಮದ ಜಾತ್ರೆ ಆಗುತ್ತೆ. ಆ ಜಾತ್ರೆಯ ವಿಶೇಷ ಏನಂತಂದ್ರೆ ಆ ಜಾತ್ರೆಯಲ್ಲಿ ಆ ಊರಿನ ಮುಖ್ಯಸ್ಥನನ್ನ ಗುರುತಿಸಲಾಗುತ್ತದೆ. ಊರಿನ ಮುಖ್ಯಸ್ಥನ ಗುರುತಿಸುವುದಕ್ಕೆ ಊರಿನಲ್ಲಿ ಹಲವಾರು ತಂಡಗಳನ್ನ ರಚಿಸಬೇಕಾಗುತ್ತದೆ. ಒಂದೊಂದು ಹಳ್ಳಿಗಳಿಂದ ಒಬ್ಬ ಮುಖ್ಯಸ್ಥನ ಆಯ್ಕೆಯಾಗಬೇಕು. ಜನ ಇದನ್ನು ಒಂದು ಸಂಭ್ರಮದಂತೆ ಆಚರಿಸುತ್ತಾರೆ. ಆದರೆ ಒಂದು ಸಮಸ್ಯೆ ಇಲ್ಲಿ ಕೆಲವೊಂದು ಹಳ್ಳಿಗಳಿಂದ ಪ್ರತಿವರ್ಷವೂ ಆಯ್ಕೆಯಾದವರೇ ಆಗ್ತಾ ಇದ್ದಾರೆ. ಅವರಲ್ಲಿ ಕೆಲವರಿಗೆ ಅಧಿಕಾರವನ್ನು ಬಿಡುವ ಮನಸ್ಸೇ ಇಲ್ಲ. ತಾವೇ ಅದ್ಭುತವನ್ನು ಸಾಧಿಸಿದ್ದೇವೆ. ಇನ್ಯಾರಿಂದಲೂ ಈ ತರಹದ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಅನ್ನುವಂತ ಯೋಚನೆ. ಇನ್ನು ಕೆಲವರು ಹೊಸ ಮನಸ್ಸುಗಳು ಹೊಸ ಯೋಚನೆಗಳು ಬಂದಾಗ ಊರಿಗೂ ಒಳ್ಳೆಯದು ಜಾತ್ರೆನೂ ಚೆನ್ನಾಗಿ ಆಗುತ್ತೆ ಅಂತ ಅಂದುಕೊಂಡಿದ್ದಾರೆ. ಇತ್ತೀಚಿಗೆ ಹೊಸತೊಂದು ನಿರ್ಣಯವನ್ನು ಊರಿನ ಪ್ರಮುಖರೆಲ್ಲ ಸೇರಿ ತೆಗೆದುಕೊಂಡರು. ಪ್ರತಿ ವರ್ಷಕ್ಕೊಂದು ಸಲ ಆಯ್ಕೆಯಾಗುವುದಕ್ಕೆ ತಾನು ಅರ್ಹ ಅಂದುಕೊಳ್ಳುವವನಿಗೆ ಒಂದು ಸಲ ಮಾತ್ರ ಅವಕಾಶ ಮುಂದಿನ ವರ್ಷ ಆತ ಸಾಮಾನ್ಯನಂತೆ ಪೂರ್ಣ ಕೆಲಸ ಮಾಡಬೇಕು. ಈ ನಿರ್ಣಯದಿಂದ ಒಂದಷ್ಟು ಜನ ನೋವನ್ನು ಅನುಭವಿಸಿದ್ದಾರೆ. ಕೆಲವರು ಸಂಭ್ರಮ ಪಟ್ಟಿದ್ದಾರೆ. ಇಲ್ಲಿ ಕೆಲವೊಂದು ಸಲ ಆ ಊರಿನಿಂದ ಅರ್ಹರಲ್ಲದವರ ಹೆಸರು ಜನರ ಮುಂದೆ ಬಂದುಬಿಟ್ಟಿದೆ. ಅರ್ಹರು ಅಲ್ಲೆಲೋ ಉಳಿದು ಬಿಟ್ಟಿದ್ದಾರೆ. ಈ ಜಾತ್ರೆಯ ಕಾರಣಕ್ಕೆ ಊರಿನವರೆಲ್ಲಾ ಒಂದಾಗ್ತಾರೋ ಇಲ್ಲವೋ ಗೊತ್ತಿಲ್ಲ. ಇಡೀ ಊರು ಹೊಸತೊಂದು ಬದಲಾವಣೆಯನ್ನು ಬಯಸಿದೆ. ಈ ಸಲದ ಜಾತ್ರೆಯಿಂದ ಊರಿಗೆ ನಾಯಕ ಯಾರು ಆಗ್ತಾರೆ ಅನ್ನೋದನ್ನ ಎಲ್ಲರೂ ಕಾಯ್ತಾ ಇದ್ದಾರೆ ನಿಮ್ಮ ಊರಲ್ಲೂ ಈ ತರದ ಜಾತ್ರೆಗಳು ನಡೆಯುತ್ತಾ ಇರಬಹುದು ಸರಿಯಾಗಿ ನೋಡಿ ಅದ್ಭುತಗಳು ವಿಶೇಷಗಳು ಆಶ್ಚರ್ಯಗಳೆಲ್ಲ ಕಣ್ಣಮುಂದೆನೇ ಹಾದು ಹೋಗುತ್ತಿರುತ್ತವೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ