ಸ್ಟೇಟಸ್ ಕತೆಗಳು (ಭಾಗ ೫೮೭) - ಊರಿನ ಬೆಳಕು
ದೇವರು ನಮಗೆ ಕಣ್ಣು ನೀಡಿರುವುದು ಸುತ್ತಮುತ್ತ ಗಮನಿಸ್ತಾ ಮುಂದಿನ ದಾರಿಯನ್ನು ಗುರುತಿಸಿಕೊಂಡು ಮುಂದೆ ಹೋಗು ಅಂತ. ಆದರೆ ಕಾಲ ಒಂದಷ್ಟು ಬದಲಾಗಿ ಬಿಟ್ಟಿದೆ ಅಲ್ವಾ? ಹಾಗಾಗಿ ನಾವು ಸುತ್ತಮುತ್ತ ಗಮನಿಸುವುದನ್ನು ಬಿಟ್ಟು ಕಣ್ಣೆತ್ತಿ ದೂರದಲ್ಲೇನು ಕಾಣುತ್ತಿದೆ ಹೊಸತೇನೂ ಕಾಣೋಕೆ ಸಿಕ್ತದೆ ಅನ್ನೋದನ್ನ ಗಮನಿಸ್ತಾರೆ. ಮುಂದೆ ಸಾಗುತ್ತಾ ಇದ್ದೇವೆ. ಸುತ್ತಮುತ್ತ ಮನಸ್ಸಿದ್ದರೆ ನಮಗೆ ತುಂಬಾ ಅದ್ಭುತವಾದದ್ದು ಕಾಣ ಸಿಗುತ್ತೆ. ಆದರೆ ನಾವದನ್ನ ಗಮನಿಸೋದೇ ಇಲ್ಲ. ನಮಗೆ ನಮ್ಮ ಸುತ್ತಮುತ್ತ ಕಾಣದ ಕಾರಣ ದೂರದ ನಮಗರಿವಿಲ್ಲದ ಯಾರೋ ಹೇಳಿರುವ ಇಂತಹದೇ ಒಂದೆರಡು ಉದಾಹರಣೆಗಳು ಸಿಕ್ಕರೆ ನಮಗದು ಅದ್ಭುತ. ಮತ್ತೆ ಅವರನ್ನು ನಮ್ಮೂರಿಗೆ ಕರೆದು ಅದೇನು ಸಂಭ್ರಮ ಮೆರವಣಿಗೆ ಎಲ್ಲವನ್ನೂ ಮಾಡುತ್ತೇವೆ. ನಮ್ಮ ಮನೆಯ ನಮ್ಮ ಬೀದಿಯ ನಮಗೆ ಹೆಗಲು ಕೊಟ್ಟ ಒಂದಷ್ಟು ಪ್ರತಿಭೆಗಳಿಗೆ ವೇದಿಕೆ ಒದಗಿಸುವುದಕ್ಕೂ ಹಿಂದೆ ಮುಂದೆ ನೋಡುತ್ತೇವೆ. ನಮಗೆ ಅದರ ಅರ್ಥವೂ ಆಗುವುದಿಲ್ಲ. ಯಾವುದೇ ದೊಡ್ದ ಊರಿನವರು ನಮ್ಮೂರಿನ ಪ್ರತಿಭೆಯನ್ನ ಅವರು ಸನ್ಮಾನಿಸಿದಾಗ ಅಭಿನಂದಿಸಿದಾಗ ನಮಗೆ ನಮ್ಮೂರಿನಲ್ಲೂ ಒಂದು ಪ್ರತಿಭೆ ನಮ್ಮೂರಿನಲ್ಲೂ ಒಂದು ಪ್ರತಿಭೆ ಇದೆ ಅನ್ನುವ ನೆನಪು ಬರುತ್ತದೆ. ಇಲ್ಲಿ ಆಗಬೇಕಾಗಿರುವುದು ಬದಲಾವಣೆ. ಮೂಲದಿಂದಲೇ ಆಯೋಜಿಸುವಂತಹ ಕಾರ್ಯಕ್ರಮಗಳಾಗಿರಬಹುದು ಒಂದಷ್ಟು ವಿಚಾರಗಳನ್ನು ಮನಸ್ಸಿನೊಳಗೆ ತುಂಬಿಕೊಂಡು ಅದರಿಂದ ಆಗಬೇಕಾದ ಬದಲಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಆಯೋಜಿಸಬೇಕು. ಆಗ ಬದಲಾವಣೆಯ ಗಾಳಿ ಬೀಸಲಾರಂಬಿಸುತ್ತದೆ. ಗಾಳಿ ಬೀಸ್ತಾ ಬೀಸ್ತಾ ನಮಗೆ ನಮ್ಮೂರಿನ ಪ್ರತಿಭೆಯ ಪರಿಮಳ ಮೂಗಿಗೆ ಬಡಿತದೆ. ಆಗ ಒಂದಷ್ಟು ಸುತ್ತಮುತ್ತ ಕಣ್ಣಾಡಿಸುವುದಕ್ಕೆ ಆರಂಭ ಮಾಡುತ್ತೇವೆ. ಏನು ದೂರದಲ್ಲಿರುವ ಮಿನುಗುವ ನಕ್ಷತ್ರಗಳನ್ನು ಗಮನಿಸುವುದನ್ನು ಬಿಟ್ಟು ನಮ್ಮ ಮನೆಯ ನಮ್ಮೂರಿನ ಚಿಮಿಣಿ ದೀಪಗಳನ್ನಾದರೂ ಗಮನಿಸಿದರೆ ದೂರದ ಬೆಳಕಿಗಿಂತ ದಾರಿಗೊಂದಿಷ್ಟು ಬೆಳಕು ಬಿದ್ದು ಬದುಕು ನೆಮ್ಮದಿಯಾಗಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ