ಸ್ಟೇಟಸ್ ಕತೆಗಳು (ಭಾಗ ೫೮೯) - ಪ್ರಶ್ನೆ ಉತ್ತರ

ಸ್ಟೇಟಸ್ ಕತೆಗಳು (ಭಾಗ ೫೮೯) - ಪ್ರಶ್ನೆ ಉತ್ತರ

ಜೀವನದಲ್ಲಿ ಕೆಲವೊಂದು ಸಲ ‘ಛೇ’ ಅಂತ ಅನಿಸಿಬಿಡುತ್ತದೆ. ಯಾಕೆ ಅಂತ ಅಂದ್ರೆ ಎಲ್ಲರೂ ಹೇಳ್ತಾರೆ ಪ್ರಶ್ನೆಯನ್ನು ನಮ್ಮೊಳಗಿಟ್ಟುಕೊಂಡು ಉತ್ತರವನ್ನು ಅಲ್ಲಲ್ಲಿ ಹುಡುಕುತ್ತಾ ಹೋಗಬೇಕು. ನಮ್ಮ ಪ್ರಯತ್ನಕ್ಕೆ ತಕ್ಕ ಉತ್ತರಗಳು ಅಲ್ಲಲ್ಲಿ ಸಿಗ್ತವೆ ಅಂತ. ಆದರೆ ನನ್ನಲ್ಲಿ ಒಂದಷ್ಟು ಉತ್ತರಗಳು ರಾಶಿ ರಾಶಿ ಇದ್ದಾವೆ. ಆ ಉತ್ತರಗಳುಗೆ ಒಪ್ಪುವಂಥಹ ಪ್ರಶ್ನೆಗಳು ನನಗೆಲ್ಲೂ ಸಿಗ್ತಾನೆ ಇಲ್ಲ. ಎಲ್ಲಾ ಕಡೆಗೂ ಹುಡುಕೋದು ಯಾರಾದರೂ ಈ ಪ್ರಶ್ನೆಯನ್ನು ಕೇಳುತ್ತಾರೋ ಅಥವಾ ನನಗೆ ಇದಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಎಲ್ಲದರೂ ಸಿಗುತ್ತಾವೋ ಅಂತ. ಯಾವುದಾದರೂ ಸನ್ನಿವೇಶವನ್ನು ಎದುರಿಸುವಾಗ ಈ ಉತ್ತರಗಳನ್ನು ಬಳಸಿಕೊಳ್ಳಬಹುದು ಅಂತ ತುಂಬಾ ಸಮಯದಿಂದ ಕಾಯ್ತಾ ಇದ್ದೇನೆ. ನನ್ನ ಉತ್ತರಕ್ಕೆ ಹೊಂದುವಂಥ ಪ್ರಶ್ನೆಗಳಲ್ಲಿಲ್ಲ ಅವರು ಕೇಳುವಂತ ಪ್ರಶ್ನೆಗೆ ಹೊಂದುವಂಥ ಉತ್ತರಗಳು ನನ್ನ ಬತ್ತಳಿಕೆಯಲ್ಲಿಲ್ಲ ಹಾಗಂದ ಮಾತ್ರಕ್ಕೆ ನನ್ನಲ್ಲಿ ಉತ್ತರಗಳು ಇಲ್ಲವೆ ಎಂದಲ್ಲ? ಅದಕ್ಕೆ ಒಪ್ಪುವಂಥ ಪ್ರಶ್ನೆ ಸಿಕ್ಕಿಲ್ಲ ಅಂತ ಅರ್ಥ. ನಾನು ಇನ್ನೊಂದಷ್ಟು ಉತ್ತರಗಳನ್ನು ತಯಾರು ಮಾಡಿ ಇಟ್ಕೋತಾ ಹೋಗ್ತಿದ್ದೇನೆ. ಪ್ರಶ್ನೆ ಸಿಕ್ಕಿಲ್ಲ ಅಂತ ಹೇಳಿ ಬೇಜಾರು ಮಾಡಿಕೊಳ್ಳುವುದಕ್ಕಿಂತ ಇನ್ನೊಂದಷ್ಟು ಹೆಚ್ಚು ಉತ್ತರಗಳನ್ನು ತಯಾರು ಮಾಡಿಕೊಳ್ಳುವ. ಯಾವತ್ತೂ ಮುಂದೊಂದು ದಿನ ನಾನು ಕಂಡುಕೊಂಡು ಅಷ್ಟು ಉತ್ತರಗಳ ಪ್ರಶ್ನೆಗಳು ಒಂದೇ ದಿನ ಇದ್ದರೆ ಮತ್ತೆ ಉತ್ತರಕ್ಕೆ ಹುಡುಕುವ ಬದಲು ಇದ್ದ ಉತ್ತರವನ್ನೇ ಬಳಸಿಕೊಂಡರೆ ನನ್ನ ಸಮಯ ಉಳಿಯಬಹುದು. ನಾನು ಗೆಲ್ಲಲೂ ಬಹುದು. ಉತ್ತರ ಹುಡುಕುವುದನ್ನು ನಿಲ್ಲಿಸಿಲ್ಲ. ಹಾಗಾಗಿ ಇನ್ನೊಂದಿಷ್ಟು ಉತ್ತರಗಳನ್ನ ಸಂಗ್ರಹ ಮಾಡ್ತಾ ಹೋಗಿದ್ದೇನೆ. ಪ್ರಶ್ನೆಗಳಷ್ಟೇ ಸಿಗಲಿಲ್ಲ ಮುಂದೊಂದು ದಿನ ಸಿಗಬಹುದು. ಅದಕ್ಕೆ ಉತ್ತರವನ್ನು ಕೊಟ್ಟು ಕಳಿಸಿಬಿಡುತ್ತೇನೆ. ಹಾಗಾಗಿ ನಿಮ್ಮ ಸುತ್ತಮುತ್ತ ಎಲ್ಲಾದರೂ ಖಾಲಿ ಪ್ರಶ್ನೆಗಳು ಓಡಾಡ್ತಾ ಇದ್ರೆ ಅವುಗಳಿಗೆ ವಿಳಾಸ ತಿಳಿದಿಲ್ಲವಾದರೆ ನನ್ನ ಬಳಿ ಕಳಿಸಿ. ನನ್ನಲ್ಲಿ ಉತ್ತರವಿದ್ದರೆ ಉತ್ತರವನ್ನು ಕೊಟ್ಟು ಕಳಿಸುತ್ತೇನೆ, ಇಲ್ಲವಾದರೆ ಸರಿಯಾದ ಉತ್ತರ ಇರುವವರ ಬಳಿ ಕಳಿಸುತ್ತೇನೆ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ