ಸ್ಟೇಟಸ್ ಕತೆಗಳು (ಭಾಗ ೫೮) - ಅಂತೆ...

ಸ್ಟೇಟಸ್ ಕತೆಗಳು (ಭಾಗ ೫೮) - ಅಂತೆ...

ನಿಮಗೆ ಗೊತ್ತಾ! ಅದೊಂದು ರಾಜ್ಯದಲ್ಲಿ ಒಂದಷ್ಟು ಕೋಟಿ ಕೊಟ್ರೆ ಮಂತ್ರಿ ಮಾಡುತ್ತಾರಂತೆ. ಮತ್ತೊಂದು ವಿಷಯ ಆ ಸರ್ಕಾರದ ಪ್ರತಿ ಮಿನಿಸ್ಟರು ಅವರ ಮೇಲಿನವರಿಗೆ ತಿಂಗಳಿಗೆ ಇಂತಿಷ್ಟು ಕೋಟಿ ಕಳಿಸಬೇಕಂತೆ. ಅವರು ಇದ್ದಾರಲ್ಲಾ ! ಹಾ! ಅವರೇ ಹಗರಣ ಎಲ್ಲಾ ಮಾಡಿಕೊಂಡಿದ್ದರು, ಅವರನ್ನು ಮತ್ತೆ ಮಂತ್ರಿ ಮಾಡಿದ್ರಂತೆ, ಅಲ್ಲಿ ದೊಡ್ಡವರ ಒತ್ತಡ ಇದೆಯಂತೆ. ಪ್ರತಿ ಕೆಲಸಕ್ಕೂ ನಾಯಕರ ಕೈಗೆ ಕೆಲವು ಲಕ್ಷ ಕೊಡಲೇ ಬೇಕಂತೆ, ಇಡೀ ಊರು ಅವರ ಕಂಟ್ರೋಲ್ನಲ್ಲಿ ಅಂತೆ, ಅವರು ಜೈಲಿಗೆ ಹೋಗುವ ಪರಿಸ್ಥಿತಿ ಬಂದಾಗ ದೊಡ್ಡ ಒಬ್ಬರನ್ನ ಕರೆಸಿ ರಹಸ್ಯ ಸಭೆ ಮಾಡಿ ಕೆಲವು ನೂರು ಕೋಟಿಗಳನ್ನು ಕೊಟ್ಟು ಅಲ್ಲಿಂದ ಪಾರಾದ್ರಂತೆ, ಮೊನ್ನೆ ಅದೊಂದು ಕೇಸ್ ಆಯಿತಲ್ಲ ಅದನ್ನು ಮುಚ್ಚಿ ಹಾಕಿದ್ದಾರಂತೆ, ಇವತ್ತಿನ ಕಾರ್ಯಕ್ರಮಕ್ಕೆ ಅವರು ಬಂದಿದ್ರಲ್ಲ ಅದರಲ್ಲೂ ಒಂದು ರಾಜಕೀಯ ಇದೆಯಂತೆ, ಇನ್ನು ನಾಲ್ಕು ದಿನದಲ್ಲಿ ಲಾಕ್ ಡೌನ್ ಅಂತೆ, ಪರೀಕ್ಷೆ ಮಾಡುದಿಲ್ವಂತೆ, ದೇಶ ಹಾಳು ಮಾಡೋದಕ್ಕೆ  ಕೆಲವು ಜನರಿಗೆ ದುಡ್ಡು ಕೊಡುತ್ತಾರಂತೆ, ನಮ್ಮ ಮೊಬೈಲ್ನ ಎಲ್ಲ ವಿಚಾರಗಳನ್ನು ಕೆಲವರು ಸ್ಟೋರ್ ಮಾಡಿಕೊಳ್ಳುತ್ತಾರಂತೆ, ಮೊನ್ನೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಅವನು 11 ಕೋಟಿ ಗೆದ್ನಂತೆ......." ನನ್ನ ಇಡೀ ದಿನದ ಒಟ್ಟು ಮಾತುಕತೆಗಳಲ್ಲಿ ಅಂತೆ ಕಂತೆಗಳೇ ತುಂಬಿಹೋಗಿರುತ್ತದೆ. ಅವುಗಳ ನಡುವೆ ಬದುಕುವ ನನಗೆ ನಿಜಕ್ಕಿಂತ ಅಂತೆಗಳೇ ಒಂದಿಷ್ಟು ಪ್ರಿಯವಾಗುತ್ತಿವೆ. ಇದು ತುಂಬಾ ಭಯ ಪಡುವ ವಿಚಾರ, ಈ ಅಂತೆಗಳ ಸಂತೆಗಳ ನಡುವೆ ನಾನು ಹಂತ ಹಂತವಾಗಿ ಬದಲಾಗಬೇಕಾಗಿದೆ .

ನೀವೂ ಒಮ್ಮೆ ಯೋಚಿಸಿ. ಈ ಅಂತೆಗಳೇ ಒಂದಷ್ಟು  ನಿಮ್ಮಲ್ಲೂ ತುಂಬಿಹೋಗಿದ್ದಿಯಾ ಅಂತ...

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ