ಸ್ಟೇಟಸ್ ಕತೆಗಳು (ಭಾಗ ೫೯೦) - ಎಚ್ಚರ

ಸ್ಟೇಟಸ್ ಕತೆಗಳು (ಭಾಗ ೫೯೦) - ಎಚ್ಚರ

ಊರು ಬಿಟ್ಟು ಇನ್ನೊಂದು ಊರಿಗೆ ಬಂದಾಗ ಬದುಕೋದಕ್ಕೆ ಮನೆ ಹುಡುಕ್ತಿವಲ್ಲ ಅದೇ ತರ ಅವತ್ತು ಅಹಂಕಾರ ಪ್ರೀತಿ ಮಮತೆ ಪ್ರಾಮಾಣಿಕತೆ ಸತ್ಯ ದ್ವೇಷ ಅಸೂಯೆ ಇವೆಲ್ಲವೂ ವಾಸಿಸುವುದಕ್ಕೆ ಜಾಗವನ್ನು ಹುಡುಕ್ತಾ ಇದ್ದವು. ಮನುಷ್ಯನಾದರೆ ಎಲ್ಲೋ ಮರದ ಕೆಳಗೆ ಬದುಕಿ ಬಿಡಬಹುದು. ಅದರೆ ಮೇಲಿನ ಪಟ್ಟಿಯಲ್ಲಿ ಇರೋರಿಗೆ ಖಾಲಿಯಾಗಿ ಬದುಕೋದಕ್ಕೆ ಸಾಧ್ಯ ಇಲ್ಲ. ಮನುಷ್ಯರು ಬೇಕೇ ಬೇಕು. ಅಲ್ಲಿ ಯಾವ ಸ್ಥಳವನ್ನ ಅದು ಆಶ್ರಯಿಸುತ್ತದೆ ಅನ್ನೋದರ ಮೇಲೆ ಆ ವ್ಯಕ್ತಿಯ ನಾಶ ಮತ್ತು ಅಭಿವೃದ್ಧಿ ನಿಂತಿರುತ್ತೆ. ಮನಸ್ಸಿಗೋ, ತಲೆಗೋ, ಅಥವಾ ಹೃದಯದಲ್ಲಿ ನಿಲ್ಲುತ್ತೋ ಅನ್ನೋದು ಆ ವ್ಯಕ್ತಿ ಆ ಅತಿಥಿಗಳನ್ನ ಹೇಗೆ ಸ್ವಾಗತ ಮಾಡುತ್ತಾನೆ ಅನ್ನೋದರ ಮೇಲೆ ನಿಂತಿದೆ. ಯಾರ್ಯಾರಿಗೆ ಯಾರ್ಯಾರು ಬೇಕು ಅವರನ್ನು ಅವುಗಳೇ  ಆಯ್ಕೆ ಮಾಡಿಕೊಂಡಿದ್ದವು ಕೂಡ. ಆದರೆ ಎಲ್ಲೂ ಕೂಡ ಸ್ಥಿರವಾಗಿ ನಿಲ್ಲುವ ಯಾವ ಯೋಚನೆಗಳು ಕಾಣುತ್ತಿಲ್ಲ. ವ್ಯಕ್ತಿಯನ್ನು ಬದಲಿಸುತ್ತಾನೆ ಇದ್ದವು. ಈಗಲೂ ನಾನಲ್ಲಿ ರಸ್ತೆ ದಾಟುತ್ತಿರುವಾಗ ಒಂದಷ್ಟು ಜನ ವಿಳಾಸವನ್ನ ಹಿಡಿದುಕೊಂಡು ಸ್ಥಳಾವಕಾಶಕ್ಕಾಗಿ ಹುಡುಕುತ್ತಿದ್ದಾರೆ ಅಲ್ಲಿ ವಿಳಾಸ ಹುಡುಕುತ್ತಿದ್ದವರಿಂದ  ನನ್ನ ಉದ್ಧಾರ ಆಗುವ ಯಾವ ಲಕ್ಷಣವೂ ಇಲ್ಲದ ಕಾರಣ ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ. ಅವರು ನಿಮ್ಮನ್ನು ಹುಡುಕಿ ಬರಬಹುದು ನಿಮ್ಮ ಜೊತೆ ಒಂದಷ್ಟು ಮಾತುಕತೆಗಳನ್ನು ಆಡುತ್ತಾರೆ ನಿಮ್ಮನ್ನು ಸರಿಯಾಗಿ ಗಮನಿಸುತ್ತಾರೆ ಆನಂತರ ನೇರವಾಗಿ ನಿಮ್ಮ ಬಳಿ ಅನುಮತಿ ಕೇಳದೆ ನಿಮ್ಮ ಮನವೆಂಬ ಮನೆ ಒಳಗೆ ಗೂಡು ಕಟ್ಟಿಕೊಂಡು ಬಿಡುತ್ತಾರೆ ಹಾಗಾಗಿ ಸ್ವಲ್ಪ ಎಚ್ಚರ ಅಪರಿಚಿತರಿಗೆ ಮನೆ ಕೊಟ್ಟು ಬದುಕನ್ನ ನಾಶ ಮಾಡಿಕೊಳ್ಳಬೇಡಿ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ