ಸ್ಟೇಟಸ್ ಕತೆಗಳು (ಭಾಗ ೫೯೨) - ಪ್ರೀತಿ - ಜವಾಬ್ದಾರಿ
ಧ್ವನಿವರ್ಧಕಗಳು ಕೂಗುತ್ತಿದ್ದಾವೆ. ವೇದಿಕೆಯ ಮೇಲೆ ನಿಂತವರು ಆ ಸಂಘಟನೆಯನ್ನು ಕೊಂಡಾಡುತ್ತಿದ್ದಾರೆ. ಊರ ಉದ್ಧಾರಕ್ಕೆ ಇಳಿದಿರುವ ತಂಡ, ಧಮನಿತರ ನೋವಿಗೆ ಮೇಲಿಂದ ಇಳಿದು ಬಂದ ಧೀಮಂತ ತಂಡ, ಉತ್ಸಾಹದ ಚಿಲುಮೆ, ಬಡವರ ಬಂಧು, ನೋವಿನಲ್ಲಿರುವವರ ಕಣ್ಣೀರು ಒರೆಸುವ ಚಿಂತನದ ಚಿಗುರು, ಸರ್ಕಾರಿ ಯೋಜನೆಗಳನ್ನು ಜನರಿಗೆ ದಾಟಿಸುವ ತೂಗು ಸೇತುವೆ ಇವೆಲ್ಲ ದೊಡ್ಡ ದೊಡ್ಡ ಮಾತುಗಳು. ಚಪ್ಪಾಳೆಗಳೇನು? ಶಿಳ್ಳೆಗಳೇನು? ಈ ಕಾರ್ಯಕ್ರಮವನ್ನು ನೋಡುವುದಕ್ಕೆ ಸಾವಿರಾರು ಜನರನ್ನು ಒಟ್ಟು ಸೇರಿಸುವುದಕ್ಕೆ ಪಕ್ಕದೂರಿನ ನಾಟಕ ತಂಡವನ್ನು ಕರೆಸಿದ್ದರು. ಆ ನಾಟಕ ಈಗಾಗಲೇ ತನ್ನ ಅದ್ಭುತ ರಂಗ ಮಾಂತ್ರಿಕತೆಯಿಂದ ಹೆಸರುವಾಸಿಯಾಗಿತ್ತು. ನಾಟಕ ನೋಡೋಕೆ ಬಂದ ಜನರಿಗೆ ಸಂಘಟನೆಯ ಚಿಂತನೆಯ ಅದ್ಭುತಗಳನ್ನ ಬಿಚ್ಚಿಡುತ್ತಾ ಹೋದರು. ಆದರೆ ನಾಟಕ ಮಾಡೋಕೆ ಬಂದ ಕಲಾವಿದರಿಗೆ ಹೊಟ್ಟೆಗೆ ಏನಾದರೂ ತಿಂತಿರಾ ಅನ್ನೋದನ್ನ ಕೇಳುವುದಕ್ಕೂ ಕೂಡ ಒಬ್ಬರು ಇರಲಿಲ್ಲ. ವೇದಿಕೆಯಲ್ಲಿ ಬೆವರಿಳಿಸಿಕೊಂಡು ಅದ್ಭುತವಾದ ಅಭಿನಯವನ್ನು ನೀಡಿದವರಿಗೆ ಹನಿ ನೀರು ನೀಡುವವರಿರಲಿಲ್ಲ. ಮಧ್ಯರಾತ್ರಿ ದಾಟಿ ಮರುದಿನದ ಸಮಯ ಗಡಿಯಾರ ತೋರಿಸುತ್ತಿದ್ದರೂ ಹೊಟ್ಟೆಗಿನಿತೂ ಊಟ ನೀಡುವ ಪುರುಸೊತ್ತು ಅವರಿಗಿರಲಿಲ್ಲ. ಜವಾಬ್ದಾರಿ ಎಲ್ಲರೂ ವಹಿಸಿಕೊಳ್ಳುತ್ತಾರೆ, ಆದರೆ ವಹಿಸಿಕೊಂಡ ಜವಾಬ್ದಾರಿಯಲ್ಲಿ ಪ್ರೀತಿಯೂ ಇರಬೇಕಲ್ವಾ? ಉಳಿದ ಚೂರು ಅನ್ನವನ್ನು ಬಂದವರಿಗೆ ನೀಡಬೇಕಲ್ಲ ಅನ್ನುವ ಜವಾಬ್ದಾರಿಯ ದೊಡ್ಡ ಹಣೆಪಟ್ಟಿಯನ್ನು ಹೊತ್ತುಕೊಂಡು ಪ್ಲಾಸ್ಟಿಕ್ ತಟ್ಟೆಯಲ್ಲಿ ಚೂರು ಚೂರು ನೀಡುತ್ತಾ ಸಾರನ್ನು ಸುರಿಯುತ್ತಾ ನಿರ್ಗತಿಕರಿಗೆ ಅನ್ನ ದಾನದ ತರಹ ಬಡಿಸಿ ನಿದ್ದೆಯ ಮಂಪರಿನಲ್ಲಿ ಮನೆ ಕಡೆಗೆ ಹೊರಟರು. ಜನ ಸೇರಿದ್ದೇ ನಾಟಕದಿಂದ, ಅವರನ್ನು ಗಮನಿಸುವ ನಾಟಕವನ್ನು ಸಂಘಟಕರು ಮಾಡಿದರು. ವೇದಿಕೆಯಲ್ಲಿ ನುಡಿದದ್ದೆಲ್ಲವೂ ಸುಳ್ಳು ಅನ್ನೋದು ಅವರ ನಡೆ-ನುಡಿಗಳಲ್ಲೇ ಅರ್ಥವಾಗಿ ಹೋಯಿತು. ಜವಾಬ್ದಾರಿ ಪ್ರೀತಿ ಜೊತೆಯಾಗಿರಬೇಕು. ನುಡಿದಂತೆ ನಡೆಯಬೇಕು. ಆ ನಾಟಕ ತಂಡ ವೇದಿಕೆಯಲ್ಲಿ ಕಲಾಮಾತೆಯ ಸೇವೆ ನೀಡಿದ್ದಕ್ಕೆ ಧನ್ಯತೆಯಿಂದ ಊರು ಬಿಟ್ಟು ಇನ್ನೊಂದೂರಿನ ಕಡೆಗೆ ಪಯಣ ಬೆಳೆಸಿತು. ಮತ್ತೆಂದೂ ಈ ಊರಿನ ಈ ವೇದಿಕೆಯನ್ನ ಏರುವುದಿಲ್ಲ ಅನ್ನುವ ಯೋಚನೆಯನ್ನು ಹೊತ್ತು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ