ಸ್ಟೇಟಸ್ ಕತೆಗಳು (ಭಾಗ ೫೯೪) - ಯೋಚನೆ
ಜನ ದೂರದೂರಿನಿಂದ ಆಗಮಿಸಿದ್ದಾರೆ, ಅಲ್ಲೊಂದು ಸಾಂಸ್ಕೃತಿಕ ಯಾತ್ರೆ. ಬಂದವರೆಲ್ಲರಿಗೂ ಸಂಜೆಯ ಚಹಾ ನೀಡಲಾಯಿತು. ಅದರ ಜೊತೆಗೆ ತಿಂಡಿಗಳ ಪಟ್ಟಿ ದೊಡ್ಡದಿತ್ತು. ಇಷ್ಟು ದಿನದವರೆಗೂ ಒಂದೆರಡು ತಿಂಡಿಗಳನ್ನೇ ತಿಂದು ಬದುಕುತ್ತಿದ್ದ ಕಲಾವಿದರಿಗೆ ಇವತ್ತು ತಿಂಡಿಗಳ ಸಾಲುಗಳನ್ನು ನೋಡಿ ಒಂದು ಕ್ಷಣ, ಈ ಸತ್ಕಾರ ನೋಡಿ ಇದು ನಮಗೇನಾ ಅನ್ನುವಂತಹ ಯೋಚನೆಗಳು. ತುಂಬಾ ಪ್ರೀತಿಯಿಂದ ಖುಷಿಯಿಂದ ಹೊಟ್ಟೆ ತುಂಬಾ ತಿಂಡಿಯನ್ನ ತಿಂದರು. ಆಗಲೇ ಅವರ ಮನಸ್ಸಿನೊಳಗೆ ಹೊಸ ಆಲೋಚನೆಯ ಪುಟ್ಟದೊಂದು ಗೂಡು ಕಟ್ಟುವುದಕ್ಕೆ ಪ್ರಾರಂಭವಾಯಿತು. ಸಂಜೆಯ ಚಹಾ ತಿಂಡಿಯೇ ಹೇಗಿರುವಾಗ ರಾತ್ರಿಯ ಊಟ ಹೇಗಿರಬಹುದು? ಅದೇ ಯೋಚನೆಯಲ್ಲಿ ಕಾರ್ಯಕ್ರಮಗಳನ್ನು ನೀಡಿದರು. ಊಟ ಚೆನ್ನಾಗಿತ್ತು ಆದರೆ ಅವರು ಅಂದುಕೊಂಡಂತಿರಲಿಲ್ಲ. ನಿನಗೆ ಈ ವಿಷಯಾನ ಯಾಕೆ ಹೇಳುತ್ತೇನೆ ಎಂದರೆ ಯಾವುದನ್ನಾದರೂ ಕಣ್ಣ ಮುಂದೆ ಕಾಣದೆ ನೀನಾಗಿ ಊಹಿಸಿಕೊಂಡು ಬದುಕಬೇಡ. ಈ ಊಹೆ ಅನ್ನೋದು ಇದೆಯಲ್ಲಾ, ಹೀಗಾಗಬಹುದು ಹಾಗಬಹುದು ಹೀಗಿರಬಹುದು ಈ ಆಲೋಚನೆಗಳಿಗೆ ಇದು ನಿನಗೆ ನೋವನ್ನೇ ಕೊಡುವಂತದ್ದು ಆಗಿರುತ್ತದೆ. ಬಂದದ್ದನ್ನು ಸ್ವೀಕರಿಸು. ಭವಿಷ್ಯದ ಜೀವನವನ್ನು ಕನಸುಗಳಿಂದ ಬಣ್ಣಗಳಿಂದ ವೈಭವಗಳಿಂದ ತುಂಬಿಸಿಕೊಳ್ಳಬೇಡ. ಪರಿಸ್ಥಿತಿಗಳು ಬದಲಾಗುತ್ತೆ .ಎಲ್ಲವನ್ನು ಒಂದೇ ಮನಸ್ಸಿನಿಂದ ಸ್ವೀಕರಿಸಿ ಬೆಳೆಯೋದನ್ನ ಕಲಿಬೇಕು. ಅದಕ್ಕೆ ನಿನಗೆ ಆ ನಾಟಕದವರ ಕಥೆ ಹೇಳಿದ್ದು. ಎಂದು ಅಳುತ್ತಿದ್ದ ಪಕ್ಕದ ಮನೆಯ ಹುಡುಗನಿಗೆ ರಾಜಾರಾಮ್ ಹೇಳ್ತಾ ಇದ್ರು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ