ಸ್ಟೇಟಸ್ ಕತೆಗಳು (ಭಾಗ ೫೯೫) - ನಗು

ಸ್ಟೇಟಸ್ ಕತೆಗಳು (ಭಾಗ ೫೯೫) - ನಗು

ಆ ಪೇಟೆಯ ಮಧ್ಯ ಭಾಗದಲ್ಲಿ ಒಂದು ವೃತ್ತ ಇದೆ. ಆ ಊರಿಂದ ಹಾದುಹೋಗುವ ಪ್ರತಿಯೊಬ್ಬರೂ ಆ ವೃತ್ತವನ್ನು ದಾಟಿಯೇ ಮುಂದುವರಿಯಬೇಕು. ಅಲ್ಲಿ ಹಲವಾರು ಮಾರಾಟಗಾರರು ತಮ್ಮ ಸರಂಜಾಮಗಳನ್ನ ಮಾರಾಟ ಮಾಡುವುದಕ್ಕೆ ಕಾಯುತ್ತಿರುತ್ತಾರೆ. ಇತ್ತೀಚಿಗೆ ಕೆಲವು ವಾರಗಳಿಂದ ಅಲ್ಲಿ ನಗುವನ್ನು ಮಾರುವವರು ನಿಂತುಬಿಟ್ಟಿದ್ದಾರೆ. ಅವರ ಜೀವನದಲ್ಲೇನೂ ಅದ್ಭುತ ನಗುವಿಲ್ಲ ಆದರೆ ಅವರು ತಂದಿಟ್ಟ ಗೊಂಬೆಗಳು ಆಟಿಕೆಗಳು ಚಿತ್ರಗಳು ಎಲ್ಲವೂ ಕೂಡ ನಗುವನ್ನೇ ಹೊತ್ತಿವೆ .ಅಲ್ಲಿ ಹಾದು ಹೋಗುವ ಪ್ರತಿಯೊಬ್ಬರೂ ನಗುವನ್ನು ಖರೀದಿಸುತ್ತಾರೆ. ಸಂಭ್ರಮವನ್ನ ದುಡ್ಡು ಕೊಟ್ಟು ಕೊಳ್ಳುತ್ತಾರೆ. ಇತ್ತೀಚಿಗೆ ಅವರು ತಂದಿಟ್ಟ ಒಂದಷ್ಟು ಅಳು ಮುಖಗಳು ನೋವಿನ ಚಿತ್ರಗಳನ್ನು ಖರೀದಿಸುವವರೇ ಇಲ್ಲ. ಅವರಿಗೆ ಅಲ್ಲಿಯವರೆಗೂ ಅರ್ಥವಾಗಿರಲಿಲ್ಲ ಎಲ್ಲವನ್ನು ಜನ ಖರೀದಿಸುತ್ತಾರೆ ಅಂತ ಅಂದುಕೊಂಡಿದ್ದರು. ಅಳು ಮಾರಾಟವಾಗದೆ ನಗುವೆ ಮಾರಾಟವಾಗಿ ಇನ್ನೂ ಬೇಕೆನಿಸಿದಾಗ ಅವರಿಗೆ ಅರ್ಥವಾದದಿಷ್ಟೇ ಅವರ ಜೀವನದಲ್ಲಿರುವ ಅಳು ಹೋಗಿ ನಗು ಬರಬೇಕಾದರೆ ಜನರಿಗೆ ನಗುವನ್ನು ಮಾರಾಟ ಮಾಡಬೇಕು. ಅದಕ್ಕಾಗಿ ಬೇರೆ ಬೇರೆ ಊರಿಂದ ವಿಶೇಷವಾದ ನಗುಗಳನ್ನೆಲ್ಲ ತರಿಸಿ ಸಂಭ್ರಮಗಳನ್ನ ರಾಶಿ ಹಾಕಿ ಮಾರಾಟ ಮಾಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ದಿನಗಳು ತುಂಬಾ ಮುಂದುವರೆದರು ಮಾರಾಟ ಮಾಡಿದ ನಗು ಇವರ ಮೊಗದಲ್ಲಿ ಇನ್ನೂವರೆಗೂ ಪ್ರತಿಫಲಿಸಲೇ ಇಲ್ಲ. ಅಂಗಡಿಯ ಮಗು ಹೊರಗೆ ಕುಳಿತಿದೆ ಇನ್ನೊಂದಷ್ಟು ಹೆಚ್ಚು ಜನ ಬಂದು ನಗುವನ್ನು ಖರೀದಿಸಿ ಮನೆಗೆ ಮನಕೆ ಒಂದಿಷ್ಟು ನಗು ನೀಡಲಿ ಎಂದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ