ಸ್ಟೇಟಸ್ ಕತೆಗಳು (ಭಾಗ ೫೯೭) - ಕಷ್ಟ
ಕಲ್ಲು ಬೆಂಚಿನ ಮೇಲೆ ಕುಳಿತು ಯಾರು ಇಲ್ಲದ ಸ್ಥಳದಲ್ಲಿ ದೂರದಿಂದ ಮತ್ತೆ ಎದ್ದು ಎದ್ದು ಬರುತ್ತಿರುವ ಅಲೆಗಳನ್ನಾಗಿ ನೋಡುತ್ತಾ ಕುಳಿತಿದ್ದಾನೆ. ದೇಹದಲ್ಲಿ ಜೀವವೇ ಹೋಗುತ್ತಿದೆಯೇನೋ ಅನ್ನುವ ಭಾವ. ಇತ್ತೀಚಿಗೆ ಅಷ್ಟೇ ಕೆಲಸದಲ್ಲಿ ಸಂಬಳ ಹೆಚ್ಚಾಗಿತ್ತು ಬದುಕು ಹೊಸದಿಕ್ಕನ್ನು ಪಡೆದುಕೊಳ್ಳುತ್ತದೆ, ಒಂದಷ್ಟು ಉಳಿತಾಯ ಆಗುತ್ತೆ ಅಂದು ಕೊಳ್ಳುತ್ತಿರುವಾಗಲೇ ಹೊಸ ಹೊಸ ಜವಾಬ್ದಾರಿಗಳು ಇನ್ನೊಂದಷ್ಟು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ಮೊದಲಿದ್ದ ಸ್ಥಿತಿಗಿಂತ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಪರಿಸ್ಥಿತಿ ಕೈ ಮೀರಿ ಹೋಗ್ತಾ ಇದೆ. ಪ್ರತಿಯೊಂದು ಖರ್ಚುಗಳು ಎಲ್ಲಾ ಮಾಡಿ ತಿಂಗಳ ಕೊನೆಗಾಗುವಾಗ ಸ್ವಂತಕ್ಕೆ ಏನಾದರೂ ತಿನ್ನೋಣ ಅಂತಂದ್ರು ಕಿಸೆಯಲ್ಲಿದ್ದ ಹಣ ಮಾತನಾಡುವುದಕ್ಕೆ ಆರಂಭ ಮಾಡತ್ತೆ. ಆತ ಯೋಚನೆ ಮಾಡುತ್ತಿರುವುದು ಇಷ್ಟೆ ಯಾವುದೋ ಒಂದು ಸ್ಪರ್ಧೆಯಲ್ಲಿ ಸಿಕ್ಕ ಎರಡು ಸಾವಿರ ಉಳಿತಾಯದ ಬುಟ್ಟಿಗೆ ಸೇರುತ್ತದೆ ಅಂದುಕೊಂಡರೆ ತಕ್ಷಣ ಹೊಸ ಜವಾಬ್ದಾರಿ ಹುಟ್ಟಿಕೊಂಡು ಬಿಡುತ್ತೆ. ಭಗವಂತನಿಗೂ ಅನ್ನಿಸಿಬಿಟ್ಟಿದೆ ಅಂತ ಕಾಣುತ್ತೆ ಮಧ್ಯಮ ವರ್ಗದವರನ್ನು ಅಲ್ಲೇ ಇಡಬೇಕು ಅದಕ್ಕಿಂತ ಕೆಳಗೆ ತಳ್ಳಬೇಕು. ಕಷ್ಟಗಳು ಸರತಿ ಸಾಲಿನಲ್ಲಿ ಮನೆಯ ಬಾಗಿಲ ಮುಂದೆ ನಿಂತಿದೆ. ಒಬ್ಬರನ್ನ ಸಾವರಿಸಿ ಹೊರಗೆ ಕಳಿಸುವಾಗ ನಾಲ್ಕು ಜನ ಪ್ರವೇಶವಾಗುವುದಕ್ಕೆ ಇದ್ದಾರೆ. ಕಾಲ ಯಾವುದಕ್ಕೂ ಉತ್ತರ ಕೊಡುತ್ತೋ ಗೊತ್ತಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ