ಸ್ಟೇಟಸ್ ಕತೆಗಳು (ಭಾಗ ೫೯೯) - ಬದುಕು

ಸ್ಟೇಟಸ್ ಕತೆಗಳು (ಭಾಗ ೫೯೯) - ಬದುಕು

ಅದೊಂದು ಪುಟ್ಟ ಕೋಣೆ. ಮನೆಯಲ್ಲಿ ತಾವು ಮಲಗುವ ಕೋಣೆ ಇದರ ನಾಲ್ಕು ಪಟ್ಟು ದೊಡ್ಡದಿದೆ. ಆದರೆ ಇದರೊಳಗೆ ಬದುಕಲೇಬೇಕು. ಸರಿಯಾಗಿ ನೀರಿನ ವ್ಯವಸ್ಥೆಗಳು ಇಲ್ಲ, ಅಕ್ಕಪಕ್ಕದವರಿಗೆ ಜೊತೆ ಮಾತನಾಡುವುದು ಅಂತ ಅಂದ್ರೆ ಭಾಷೆ ಸಮಸ್ಯೆ, ಕೆಲಸವೋ ಬಿಡುವಿಲ್ಲದಷ್ಟು ಎಷ್ಟೇ ದುಡಿದರೂ ಸಂಬಳವು ಹೆಚ್ಚಾಗುತ್ತಿಲ್ಲ. ಹೊಸ ಅವಕಾಶಗಳು ಸಿಗುತ್ತಿಲ್ಲ. ವಯಸ್ಸು 25 ದಾಟುತ್ತಿದೆ, ಯಾರಿಗೂ ಗಮನವೂ ಇಲ್ಲ. ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಿಕೊಡಬೇಕು ಅನ್ನುವಂತಹ ಯೋಚನೆಯೂ ಇಲ್ಲ . ಅಗತ್ಯವಿದ್ದಾಗ ಕರೆ ಮಾಡಿ ಕೆಲಸ ಮಾಡಿಕೊಂಡು ಮತ್ತೆ ಮೌನವಾಗ್ತಾರೆ ಮನೆಯವರು. ಅವಳ ಮಾತಿಗಿಂತ ಹೆಚ್ಚು ಕಣ್ಣೀರೇ ಮಾತನಾಡುತ್ತದೆ. ತನ್ನ ಇಂದಿನ ಸ್ಥಿತಿಗೆ ಕಾರಣವೇನು ಅಂತ ಮತ್ತೆ ಮತ್ತೆ ಯೋಚಿಸುತ್ತಿದ್ದಾಳೆ. ನಿದ್ದೆ ಇಲ್ಲದ ರಾತ್ರಿಗಳು, ಕಣ್ಣೀರು ತಿಂದು ಮೆದುವಾಗಿರುವ ತಲೆದಿಂಬುಗಳು, ನೋವಿನ ಅಳುವನ್ನು ಕೇಳಿಸಿಕೊಂಡ ಆ ಕೋಣೆಯ ನಾಲ್ಕು ಗೋಡೆಗಳು, ಆಗಾಗ ನೋವು ಹಂಚಿಕೊಳ್ಳುವುದಕ್ಕೆ ಅಂತ ಕರೆ ಮಾಡುವ ನಾಲ್ಕು ಸ್ನೇಹಿತರನ್ನು ಬಿಟ್ರೆ ಅವಳಿಗೆ ಹೊಸ ಜಗತ್ತು ಅನ್ನೋದು ಯಾವುದು ಪರಿಚಯವಾಗಲೇ ಇಲ್ಲ. ಒಳಿತು ಆಗ್ತದೆ ಅಂತ ಇದನ್ನೇ ನಂಬಿಕೊಂಡು ವರ್ಷ 25 ದಾಟಿದ್ರು ಅಂತ ಬದಲಾವಣೆಗಳು ಏನು ಆಗಲೇ ಇಲ್ಲ. ಅಳಬಾರದು ನಾನು ಗಟ್ಟಿಯಾಗಿರಬೇಕು ಅಂದುಕೊಳ್ಳುತ್ತಾಳೆ ಆದರೆ  ಸನ್ನಿವೇಶಗಳು ಮತ್ತದೇ ಯಾರೂ ಇಲ್ಲದ ಸ್ಥಿತಿಯನ್ನು ನೆನಪಿಸಿ ಕಣ್ಣಿನ ಕಣ್ಣೀರಿಗೆ ಒಂದು ಸೂಚನೆಯನ್ನು ನೀಡುತ್ತದೆ ಆ ಸೂಚನೆ ಸಿಕ್ಕ ತಕ್ಷಣ ಕಣ್ಣೀರು ಹಾಗೆ ಇಳಿದು ಕೆನ್ನೆಯನ್ನ ತೊಯ್ದು ಜಾರಿ ಹೊರಟು ಹೋಗುತ್ತದೆ. ಇದು ಹಲವರ ಕಥೆ ಅವರವರ ಕಥೆ ಅವರವರಿಗೆ ಅನ್ವಯವಾಗುತ್ತದೆ ಅಷ್ಟೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ