ಸ್ಟೇಟಸ್ ಕತೆಗಳು (ಭಾಗ ೫೯) - ಖಾಲಿ
ಧೂಳಿನ ಕಣಗಳು ಹಾರಿ ಬರುತ್ತವೆ. ತಲೆಗೆ ಸೂರಿಲ್ಲದೆ ನೀರು ಹನಿಯುತ್ತದೆ, ಚಕ್ರಗಳು ನೀರಿನ ಹನಿಗಳನ್ನು ನೇರವಾಗಿ ಸಿಂಪಡನೆ ಮಾಡುತ್ತದೆ. ಇದೆಲ್ಲವನ್ನು ತಡೆಹಿಡಿದು ಆಕೆ ಹಣ್ಣು ಮಾರುತ್ತಾಳೆ. ಪ್ರತಿದಿನ ಮುಂಜಾನೆ ಯಜಮಾನರ ತೋಟಕ್ಕೆ ಹೋಗಿ ಅವರು ಅರುಣೋದಯಕ್ಕೆ ಮೊದಲೇ ತಮ್ಮ ಆಳುಗಳಿಂದ ಕೊಯ್ದಿಟ್ಟಿರುವ ಸೀಬೆ ಹಣ್ಣುಗಳನ್ನು ಹೊತ್ತು ತರುತ್ತಾಳೆ. ಅವಳ ಮನಸ್ಸು ಮಾಗಿದೆ ಹಣ್ಣಿನಂತೆ, ದೇಹ ಬಾಗಿದೆ ಗಿಡದ ಎಗ್ಗೆಗಳಂತೆ, ಮುಖದಲ್ಲಿ ನೆರಿಗೆ ರೇಖಾಚಿತ್ರಗಳನ್ನು ಬಿಡಿಸಿದೆ ,ಎಲೆಯಂಟಿರುವ ಕಡ್ಡಿಗಳಂತೆ, ಚಪ್ಪಲಿ ಇಲ್ಲದ ಪಾದ ಮನಸ್ಸಿನಂತೆ ಒಡೆದಿದೆ, ಬಣ್ಣ ಕಳೆದುಕೊಂಡ ಸೀರೆ ಮೈಗಂಟಿದೆ ಬದುಕಿನಂತೆ.
ಅವಳು ಹೊರಲಿಕ್ಕೆ ಸಾಧ್ಯವಾಗದೆ ಇರುವಷ್ಟು ಭಾರವನ್ನು ಬುಟ್ಟಿಯಲ್ಲಿ ಹಣ್ಣು ತುಂಬಿಸಿಕೊಂಡು ಪೇಟೆಗೆ ನಡೆಯುತ್ತಾಳೆ. ಸಂಜೆಯಾಗುವಾಗ ತಲೆಯ ಮೇಲಿನ ಬಾರ ಇಳಿದರೆ, ಬುಟ್ಟಿ ಖಾಲಿಯಾದರೆ, ಖಾಲಿಯಾದ ಹೊಟ್ಟೆ ತುಂಬುತ್ತದೆ, ಯೋಚನೆಯ ಭಾರ ಇಳಿಯುತ್ತದೆ. ಬುಟ್ಟಿ ಬಿಡಿಸಿಟ್ಟು ನಾಲ್ಕು ರಸ್ತೆ ಕೊಡುವಲ್ಲಿ, ಮೂಲೆಯಲ್ಲಿ ಕುಳಿತು ಕಾಯುತ್ತಾಳೆ. ಸುಮ್ಮನೆ ಹಾದು ಹೋಗುವವರು ಬಂದು ಖರೀದಿಸುವರೋ ಎಂಬ ಆಸೆಯಿಂದಲೇ. ಕೆಲವು ಪಾದಗಳು ಇತ್ತ ಬಳಿ ಬಂದು ನಿಂತು ಖರೀದಿಸಿ ತೆರಳುತ್ತವೆ. ಬುಟ್ಟಿ ಖಾಲಿಯಾಗಿ ಹೊಟ್ಟೆ ತುಂಬಿದ ದಿನಗಳು ಕೆಲವು, ಖಾಲಿಯಾಗದೆ ಮನಸ್ಸು ಭಾರವಾಗಿ ಮನೆಗೆ ಮರಳಿದ ದಿನಗಳೇ ಹಲವು. ಅವಳ ಬುಟ್ಟಿಯ ಎದುರಿನ ಅಂಗಡಿಯೊಂದರಲ್ಲಿ ಸಣ್ಣ ಪೆಟ್ಟಿಗೆಯಲ್ಲಿ ಬೆಳಕಿನ ವಿನ್ಯಾಸದ ನಡುವೆ ಇಟ್ಟಿರುವ ಇದೇ ಸೀಬೆಹಣ್ಣುಗಳು ಎರಡುಪಟ್ಟು ದುಡ್ಡಿಗೆ ಮಾರಾಟವಾಗುತ್ತಿವೆ. ಇತ್ತ ಕಡೆಗೆ ಜನರೇಕೆ ಬರುತ್ತಿಲ್ಲ ಅನ್ನುವ ಪ್ರಶ್ನೆಗೆ ಅವಳಿಗೆ ಉತ್ತರ ಸಿಕ್ಕಿಲ್ಲ. ಹಸಿವೆ ಇವಳ ಮುಖದಲ್ಲಿ ಸದಾ ಜೀವಂತವಿರುತ್ತದೆ.
ಆಕೆ ನಿಮಗೇನಾದರೂ ರಸ್ತೆಯ ಬದಿಯಲ್ಲಿ, ನಾಲ್ಕು ರಸ್ತೆ ಕೂಡುವಲ್ಲಿ ಎದುರಾದರೆ ಹಸಿವಿಲ್ಲದಿದ್ದರೂ ಸ್ವಲ್ಪವಾದರೂ ಖರೀದಿಸಿ. ಆಕೆಯ ಹೊಟ್ಟೆ ತುಂಬಲಿ ಅಲ್ವಾ…
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ