ಸ್ಟೇಟಸ್ ಕತೆಗಳು (ಭಾಗ ೬೦೦) - ಯಾಕೆ?
"ನೋವ್ಯಾಕೋ ಒಳ್ಳೆಯದಾಗುತ್ತೆ." ಸುಮ್ನಿರೋ ಮಾರಾಯಾ ನೋವು ಅನುಭವಿಸಿದವನಿಗೆ ಮಾತ್ರ ಗೊತ್ತು. ಮುಖಕ್ಕೊಂದಿಷ್ಟು ಬಣ್ಣ ಬಳಿದು ವೇದಿಕೆಯಲ್ಲಿ ಜನರಿಗೆ ನಗುವಿನ ಔತಣವ ಉಣಿಸಿ ಸಂಭ್ರಮದ ಜೊತೆಗೆ ಪುಟ್ಟ ಸಂಭಾವನೆಯೊಂದಿಗೆ ರಾತ್ರಿಯ ನಿದ್ದೆಯನ್ನ ಕಲಾದೇವಿಗರ್ಪಿಸಿ ಮನೆಗೆ ಮರಳುವುದಾಗಿತ್ತು. ಆದರೆ ಇಂದು ಹಾಗಾಗಲಿಲ್ಲ. ಮಳೆಯ ಹನಿಗಳು ನಿದಾನವಾಗಿ ಹಲವು ದಿನಗಳ ನಂತರ ಮನೆಗೆ ಮರಳಿದಂತೆ ವೇಗವನ್ನ ಪಡೆದುಕೊಂಡವು. ನಾಟಕ ನೋಡೋಕೆ ಬಂದವರು ನೋವಿನಿಂದ ಖುರ್ಚಿ ಬಿಟ್ಟು ಏಳುವಾಗ ಮನಸಿಗೇಕೋ ನೋವಿನ ಚುಚ್ಚು ಮದ್ದು ಚುಚ್ಚಿದಂತಾಯಿತು. ಸಂಭಾವನೆ ಒಂದಷ್ಟು ಬದುಕಿನ ದಾರಿಗೆ ಹೊಸ ಬೆಳಕಾಗಿತ್ತು ಅದ್ಯಾವುದು ಸಾಧ್ಯವಾಗದೇ ಖಾಲೀ ಕೈ ಮತ್ತು ಭಾರವಾದ ಮನಸ್ಸಿನಿಂದ ಮತ್ತೆ ಊರಲ್ಲದ ಊರಿನಿಂದ ಹಿಂತಿರುಗುವಾಗ ನೋವಾಗುವುದು ಸಹಜ ತಾನೇ. ಅದಕ್ಕೆ ಹೇಳಿದ್ದು ನೋವಾಯ್ತು ಅಂತ. ಆದರೂ ಭಗವಂತ ಇಂದೇ ವರುಣದೇವನನ್ನು ಕಳುಹಿಸಿದ್ದು ಯಾಕೆ ಅನ್ನೋದು ಅರ್ಥವಾಗಲಿಲ್ಲ. ಬದುಕಿನ ಕನಸುಗಳ ಮೇಲೆ ನೀರೆರೆದು ನಂದಿಸಿದ್ದು ಯಾಕೆ ಅರ್ಥವಾಗ್ಲಿಲ್ಲ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ