ಸ್ಟೇಟಸ್ ಕತೆಗಳು (ಭಾಗ ೬೦೧) - ತಪ್ಪು ಸರಿ
ತಪ್ಪು ಅವನಲ್ಲಿಟ್ಟುಕೊಂಡು ಬೇರೆಯವರನ್ನು ದೂರಿ ಪ್ರಯೋಜನವೇನು? ಮನೆಯನ್ನ ಕಟ್ಟಬೇಕು ಅಂತ ನಿರ್ಧಾರ ಮಾಡಿ ಆಗಿತ್ತು. ಅದಕ್ಕಾಗಿ ಸರಿಯಾದ ಮೇಸ್ತ್ರಿಯ ಅವಶ್ಯಕತೆ ಇತ್ತು. ಅವನ ಊರಲ್ಲಿ ತುಂಬಾ ಜನ ಮೇಸ್ತ್ರಿಗಳಿದ್ದಾರೆ, ಒಬ್ಬೊಬ್ಬರದು ಒಂದೊಂದು ತರದ ಕೆಲಸ. ಕೆಲವರು ನಿಧಾನ, ಕೆಲವರದ್ದು ವೇಗ, ಕೆಲವರದು ಅಚ್ಚುಕಟ್ಟು, ಕೆಲವರದ್ದು ಅರ್ದಂಬರ್ದ, ಹೀಗೆ ಆತನಿಗೆ ಆಯ್ಕೆಗಳು ತುಂಬಾ ಇದ್ದವು. ಆದರೆ ತನ್ನ ಸ್ವಂತ ಮನೆಯನ್ನ ಕಟ್ಟುವುದಾದರೂ ಆತ ತನಗೆ ಬೇಕಾದ ರೀತಿಯ ಮೇಸ್ತ್ರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಯಾವನು ಹೆಚ್ಚು ಪ್ರಸಿದ್ಧನಾಗಿದ್ದಾನೆ, ಯಾವನನ್ನು ನನ್ನ ಹೆಚ್ಚಿನ ಮನೆಯವರು ಕರೆದುಕೊಂಡು ಹೋಗುತ್ತಾರೆ, ಯಾವನಿಗೆ ಊರಲ್ಲಿ ತುಂಬಾ ಹೆಸರಿದೆ, ಯಾವನು ತನ್ನ ಬಳಗಕ್ಕೆ ಸೇರಿದವ, ಯಾವನು ತನ್ನೂರಿನವ, ಯಾವನಿಂದ ತನಗೆ ಉಪಯೋಗವಾಗಲಿದೆ, ಯಾವನಿಂದ ಒಂದಷ್ಟು ಕಡಿಮೆ ಸಮಯದಲ್ಲಿ ಕೆಲಸ ಸಾಧ್ಯವಾಗುತ್ತದೆ, ಎಲ್ಲಾ ಯೋಚನೆಗಳನ್ನು ಮಾಡಿಕೊಂಡು ಮೇಸ್ತ್ರಿಯನ್ನು ನಿರ್ಧಾರ ಮಾಡಿದ. ನಿರ್ಧಾರ ಮಾಡಿ ಪೂರ್ತಿ ದುಡ್ಡನ್ನು ಅವನ ಕೈಗೆ ಕೊಟ್ಟುಬಿಟ್ಟ. ಮೇಸ್ತ್ರಿ ಕೆಲಸ ಮನೆಯನ್ನು ಕಟ್ಟುವುದು. ದುಡ್ಡು ಪೂರ್ತಿಯಾಗಿ ಸಿಕ್ಕಿಯಾಗಿದೆ ಮನೆಯ ಯಜಮಾನ ಮೇಸ್ತ್ರಿಯನ್ನೇ ದೇವರೆಂದು ನಂಬಿಕೊಂಡು ಕೈಮುಗಿದು ನಿಂತುಬಿಟ್ಟಿದ್ದಾನೆ. ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಾ ಆತನನ್ನು ಎತ್ತರಕ್ಕೆ ಏರಿಸಿ ಬಿಟ್ಟಿದ್ದಾನೆ. ಮನೆ ಪೂರ್ತಿ ಆಗೋವರೆಗೂ ಆತ ಹೇಳಿದ್ದನ್ನ ಕೇಳಲೇಬೇಕು, ಕೊನೆಗೊಂದು ದಿನ ಮನೆ ಸಿಕ್ಕಿತು. ಸಂಭ್ರಮದಿಂದ ಗೃಹಪ್ರವೇಶವನ್ನು ಮಾಡಿಕೊಂಡ .ಆದರೆ ಆ ಮನೆ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಒಂದಷ್ಟು ದಿನಗಳಲ್ಲಿ ಅಲ್ಲಲ್ಲಿ ಬಿರುಕು ಬಿಡುವುದಕ್ಕೆ ಪ್ರಾರಂಭ ಆಯಿತು. ಕುಸಿದು ಬಿತ್ತು. ಈಗ ತಲೆ ಮೇಲೆ ಕೈಹೊತ್ತು ಹೊರಗೆ ಕುಳಿತುಬಿಟ್ಟ. ತಪ್ಪು ಯಾರದ್ದು? ಮನೆ ಕಟ್ಟೋವಾಗ ಯಾರ ಬಳಿ ತನ್ನ ಮನೆಯನ್ನು ಕಟ್ಟೋದಕ್ಕೆ ಕೊಡಬೇಕು ಅಂತ ನಿರ್ಧಾರ ಮಾಡಬೇಕಾಗಿರೋದು ಮನೆಯ ಯಜಮಾನ, ತಪ್ಪು ತನ್ನಲ್ಲಿಟ್ಟುಕೊಂಡು ಬೇರೆಯವರ ಕಡೆಗೆ ಕೈ ಮಾಡಿ ತೋರಿಸುವುದು ಎಷ್ಟು ಸಮಂಜಸ?
ಹಾಗಾಗಿ ಇವತ್ತು ರಾಜ್ಯವೆಂಬ ಮನೆಯನ್ನು ಕಟ್ಟುವ ಕೆಲಸದ ಜವಾಬ್ದಾರಿಯನ್ನ ಯಾರ ಕೈಗೆ ನೀಡಬೇಕು ಅನ್ನೋದನ್ನ ನಿರ್ಧರಿಸುವ ಜವಾಬ್ದಾರಿಯುತ ದಿನ ಪ್ರೀತಿಯಿಂದ ಸಂಭ್ರಮದಿಂದ ಮತಗಟ್ಟೆಗೆ ತೆರಳಿ ನನ್ನ ರಾಜ್ಯವನ್ನು ಕಟ್ಟುವ ಸುಭದ್ರ ಯೋಜನೆಯ ಸದೃಢ ನಾಯಕನನ್ನ ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನೀವು ಮನೆ ಕಟ್ಟುವುದಕ್ಕೆ ಮೇಸ್ತ್ರಿಯನ್ನು ಹುಡುಕುತ್ತಿದ್ದೀರಿ ಒಳ್ಳೆಯವರನ್ನೇ ಹುಡುಕಿ ಬಿಡಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ