ಸ್ಟೇಟಸ್ ಕತೆಗಳು (ಭಾಗ ೬೦೨) - ಪಾಠ

ಸ್ಟೇಟಸ್ ಕತೆಗಳು (ಭಾಗ ೬೦೨) - ಪಾಠ

ಅಪ್ಪ ಆ ದಿನ ಸಂಜೆ ಮನೆಯ ಟೇರೆಸ್ ಗುಡಿಸುವುದಕ್ಕೆ ಹೇಳಿದರು, ಯಾಕೆ ಅಂತ ಕೇಳಿದ್ರೆ, ಗುಡಿಸಿಬಿಡು ಸ್ವಚ್ಛವಾಗಿರಲಿ ಅಂತಂದ್ರು. ಹಾಗೆ ನೀರು ಹೋಗುವುದಕ್ಕೆ ಯಾವುದೆಲ್ಲ ಸ್ಥಳಾವಕಾಶಗಳಿದಿಯೋ ಎಲ್ಲವನ್ನು ಸ್ವಚ್ಛಗೊಳಿಸಿದರು.  ನೀರು ಹೊರಗೆ ಹೋಗುವುದಕ್ಕೆ ಹಾಕಿರುವ ಪೈಪ್‌ಗೆ ಉದ್ದದ ಲಕೋಟೆಯನ್ನು ಕಟ್ಟಿದರು. ಒಟ್ಟು ಮನೆಯ ಸುತ್ತಮುತ್ತಲಲ್ಲಿ ಒಂದಷ್ಟು ಬದಲಾವಣೆಗಳಾದವು. "ಅಪ್ಪ ಮಳೆ ಬರುವ ಯಾವ ಲಕ್ಷಣವೂ ಇಲ್ಲ ,ಮಳೆ ಬಂದಾಗ ಮಾಡಿದ್ರೆ ಸಾಕಲ್ವಾ, ಈಗ್ಲೇ ಯಾಕ್ ಮಾಡೋದು ಮತ್ತೆ ಕಸ ಬೀಳೋದಿಲ್ವಾ"? ಅಂತಂದ್ರೆ "ಮಾಡಿಬಿಡು ಮತ್ತೆ ತೊಂದರೆ ಆಗುತ್ತೆ"  ನಾನಂದುಕೊಂಡೆ ಅವರಿಗೆ ಏನಾದರೂ ಒಂದು ಕೆಲಸ ಮಾಡ್ತಾ ಇರಬೇಕು, ಅದಕ್ಕೆ ಇದನ್ನ ಮಾಡಿದ್ದಾರೆ ಅಂತ. ಆದರೆ ಆ ದಿನ ರಾತ್ರಿ ತುಂಬಾ ಜೋರು ಮಳೆ ಬಿತ್ತು. ಅದು ಮಧ್ಯರಾತ್ರಿ. ಮರುದಿನ ಬೆಳಿಗ್ಗೆ ಎದ್ದು ನೋಡ್ತೀನಿ ಎಲ್ಲೂ ಕೂಡ ನೀರು ನಿಂತಿಲ್ಲ ಕಸ ನಿಂತಿಲ್ಲ. ತುಂಬಾ ಶುಭ್ರವಾಗಿ ದೊಡ್ಡ ಟ್ಯಾಂಕಗಳಲ್ಲಿ ನೀರು ತುಂಬಿ ಬಿಟ್ಟಿದೆ. ಮನೆ ಸುತ್ತಮುತ್ತ ಕಸ ಕಡ್ಡಿಗಳೆಲ್ಲ ಹರಿದು ಹೋಗಿ ಸ್ವಚ್ಛವಾಗಿದೆ. ಅವತ್ತು ಅಂದುಕೊಂಡೆ, ಸಮಸ್ಯೆಗಳು ಬರುವುದಕ್ಕಿಂತ ಮೊದಲೇ ಒಂದಿಷ್ಟು ತಯಾರಿ ಇದ್ರೆ ಸಮಸ್ಯೆ ಅನ್ನೋದೇ ಬಳಿ ಬರುವುದಿಲ್ಲ. ಯಾವುದೆಲ್ಲ ಸಾಧ್ಯತೆಗಳಿದ್ಯೋ ಎಲ್ಲದಕ್ಕೂ ತಯಾರಿಗಳನ್ನು ಮಾಡಿಟ್ಟುಕೊಂಡರೆ ಮುಂದೊಂದು ದಿನ ತಲೆ ಮೇಲೆ ಕೈ ಹೊತ್ತು ಕೂತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಅಂತ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ