ಸ್ಟೇಟಸ್ ಕತೆಗಳು (ಭಾಗ ೬೦೫) - ಒಳಿತು ಕೆಡುಕು
ನೋಡೋದಕ್ಕೆ ತಿಳಿದೋರ ಕಾಣ್ತಾ ಇದ್ದಾನೆ. ಬಂದವರಿಗೆಲ್ಲ ಉಪದೇಶ ಕೊಡಲು ಆರಂಭ ಮಾಡಿದ್ದಾನೆ. "ನೋಡಿ ನಿಮ್ಮ ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೆ, ನೀವು ನೋಡುವ ಪ್ರತಿಯೊಂದು ಘಟನೆಗಳಲ್ಲೂ ಕೂಡ ಒಳ್ಳೆಯದನ್ನು ಕಾಣುತ್ತಾ ಹೋಗಿ. ಸದಾ ಒಳ್ಳೆಯದಾಗುತ್ತೆ"
ಪ್ರತಿಯೊಂದನ್ನ ಒಳ್ಳೆಯ ರೀತಿಯಲ್ಲಿ ಯೋಚನೆ ಮಾಡಿ ಅಂತ ಹೇಳಿದ್ದು ಕೇಳಿ ರಾಮಯ್ಯನಿಗೆ ಸಿಟ್ಟು ಸ್ವಲ್ಪ ತಲೆಗೇರಿತು. ನೇರವಾಗಿ ಅವನ ಮುಂದೆ ನಿಂತು ಪ್ರಶ್ನೆ ಮಾಡೋದಕ್ಕೆ ಆರಂಭ ಮಾಡಿದ್ರು. ನೋಡಿ ಸ್ವಾಮಿ ಇದನ್ನ ನೀವು ಹೇಳ್ತಾ ಇರಬಹುದು, ಆದರೆ ಇದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಂದು ವಿಚಾರದಲ್ಲೂ ಒಳಿತು ಕೆಡುಕು ಅನ್ನೋದು ಇದ್ದೆ ಇರುತ್ತೆ. ಎಲ್ಲದರಲ್ಲೂ ಒಳ್ಳೆಯದನ್ನು ಹುಡುಕುವುದಕ್ಕೆ ಸಾಧ್ಯ ಆಗುವುದಿಲ್ಲ. ಊರಲ್ಲಾಗುತ್ತಿರುವ ಅತ್ಯಾಚಾರಗಳಾಗಿರಬಹುದು, ಕೊಲೆಗಳಾಗಿರಬಹುದು ಮೋಸಗಳಾಗಿರಬಹುದು ಇವೆಲ್ಲವೂ ಕೂಡ ಕೆಟ್ಟವು. ಕೆಟ್ಟ ವಿಚಾರಗಳು ಇವುಗಳಿಂದ ಕೆಟ್ಟ ವಿಚಾರಗಳನ್ನು ಗಮನಿಸಬೇಕೇ ಹೊರತು ಒಳ್ಳೆಯದನ್ನಲ್ಲ. ನಡೆದಿರುವ ಅಪಘಾತದಿಂದ ಒಂದಷ್ಟು ಜನ ಸತ್ತಿದ್ರು ಕೆಲವೊಂದು ಅಷ್ಟು ಜನ ಬದುಕಿದ್ದಾರಲ್ಲ ಅಂತ ಯೋಚನೆ ಮಾಡೋದು ಕೂಡ ಒಳ್ಳೆಯದಲ್ಲ. ನನ್ನ ಪ್ರಕಾರ ಯಾವ ಘಟನೆ ಹೇಗೆ ನಡೆದಿದೆಯೋ ಅದನ್ನು ಹಾಗೆ ಸ್ವೀಕರಿಸಬೇಕು. ಊರು ಬದಲಾಗಬೇಕು ಒಂದಷ್ಟು ಅಭಿವೃದ್ಧಿಯಾಗಬೇಕು ವ್ಯಕ್ತಿ ಬದಲಾಗಬೇಕು ಸಂಸ್ಥೆ ಬದಲಾಗಬೇಕು ಅಂತ ಇದ್ರೆ ಒಂದಷ್ಟು ಸಣ್ಣಪುಟ್ಟ ತಪ್ಪುಗಳನ್ನು ಹುಡುಕುವರು ಸದಾ ಜೊತೆಗೆ ಇರಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ಹುಡುಕದಿದ್ರೆ ಅದೊಂದು ದಿನ ದೊಡ್ಡ ತಪ್ಪಾಗಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ತಪ್ಪುಗಳು ಹುಡುಕುವವರು ಜೊತೆಗಿದ್ದಾಗ ನಾವು ಸರಿದಾರಿಯಲ್ಲಿ ಇರುತ್ತೇವೆ .ಇಲ್ಲದಿದ್ರೆ ಜೀವನ ಅಡ್ಡ ದಾರಿ ಹಿಡಿದು ನಾಶದ ಕಡೆಗೆ ಸಾಗಿ ಬೂದಿಯಾಗಿ ಹೋಗುತ್ತೇವೆ." ಎದುರಿನಲ್ಲಿ ಉಪದೇಶ ಕೊಡುತ್ತಿದ್ದವನಿಗೆ ಮುಂದೆ ಮಾತೇ ಹೊರಡಲಿಲ್ಲ. ಜನ ಇವನ ಮಾತು ಕೇಳಿಕೊಂಡು ಅಲ್ಲಿಂದ ಹೊರಟು ಹೋಗಿಬಿಟ್ಟರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ