ಸ್ಟೇಟಸ್ ಕತೆಗಳು (ಭಾಗ ೬೦೮) - ಮರಳಿದ
![](https://saaranga-aws.s3.ap-south-1.amazonaws.com/s3fs-public/styles/article-landing/public/sokldgar.jpg?itok=t5r0osGp)
ಆತ ಮನೆ ಬಿಟ್ಟು ಹೋಗಿ ವರ್ಷ ನಾಲ್ಕು ಆಗಿದೆ. ಆತ ಮನೆ ಬಿಟ್ಟು ಹೊರಟಾಗ ಆತನ ಮಗು ಅವಳ ಹೊಟ್ಟೆಯಲ್ಲಿತ್ತು. ಇಂದು ಆ ಮಗುವಿಗೆ ನಾಲ್ಕು ವರ್ಷ ಆ ಮಗುವಿನ ಮುಖವನ್ನು ಹತ್ತಿರದಿಂದ ನೋಡುವ ಭಾಗ್ಯ ಆತನಿಗೆ ಸಿಕ್ಕಿಲ್ಲ. ಮಗುವನ್ನ ಎತ್ತಿ ಮುದ್ದಾಡಬೇಕು ಅನ್ನುವಂತ ಕನಸು, ಕೈ ಹಿಡಿದು ದೂರ ನಡೆಯಬೇಕು ಎಲ್ಲವನ್ನು ಆತ ಮನಸ್ಸಿನೊಳಗೆ ಕಟ್ಟಿಕೊಂಡಿದ್ದಾನೆ. ದಿನ ನಿಗದಿಯಾಗಿಲ್ಲ. ಆತ ಫೋನಿನಲ್ಲಿ, ಪತ್ರದಲ್ಲಿ ತಿಳಿಸ್ತಾ ಇದ್ದಾನೆ. ಮನೆಗೆ ಬರುವ ದಿನಾಂಕವನ್ನು ತಿಳಿಸಿದ್ದ ,ಮನೆಯಲ್ಲಿ ಎಲ್ಲ ಸಂಭ್ರಮ, ಇನ್ನೊಂದು ತಿಂಗಳು ಇದೆ ಅನ್ನುವಾಗಲೇ ಆತನಿಗೆ ಇಷ್ಟದ ಎಲ್ಲ ವಸ್ತುಗಳನ್ನ ವಿಚಾರಗಳನ್ನ ತಯಾರಿ ಮಾಡುವುದಕ್ಕೆ ಪಟ್ಟಿ ಮಾಡಿಕೊಂಡರು. ಹಬ್ಬಗಳೆಲ್ಲ ಅದೇ ದಿನಾಂಕದಲ್ಲಿ ಆಗುವ ಹಾಗೆ ನೋಡಿಕೊಂಡರು. ಆ ದಿನ ಬಂದೇ ಬಿಟ್ಟಿತು. ಆತ ಗಡಿಯಿಂದ ಬಂದ ಆದರೆ ಆತನ ಜೊತೆಗೆ ಹಲವಾರು ಜನ ಬಂದಿದ್ರು. ಮನೆಯವರು ಎಷ್ಟೇ ಮಾತನಾಡಿದರು ಆತ ಮಾತನಾಡಲಿಲ್ಲ. ಅವಳ ಕಣ್ಣುಗಳಲ್ಲಿ ಸಂಭ್ರಮದಿಂದ ಆತನನ್ನು ಎದುರು ನೋಡುವ ಆಸೆಯಿತ್ತಾದರೂ ಆತನ ಕಣ್ಣುಗಳು ಜೀವ ಕಳೆದುಕೊಂಡಿದ್ದವು. ಆತ ಓಡಿ ಬಂದು ಮಗುವನ್ನು ಮುದ್ದಿಸಲಿಲ್ಲ, ಅವಳನ್ನು ಅಪ್ಪಿಕೊಳ್ಳಲಿಲ್ಲ ತಂದೆ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಬೇಡಲಿಲ್ಲ. ಆತನೆದೆಯ ಮೇಲೆ ಹೂವಿನ ದಳಗಳೆಲ್ಲವೂ ಜೀವ ಕಳೆದುಕೊಂಡು ಚಿರ ನಿದ್ರೆಯಲ್ಲಿದ್ದವು. ಅವನಿಗೆ ಇಷ್ಟವಾದವರೆಲ್ಲವೂ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದಾರೆ. ಆತ ಕೊಟ್ಟ ಮಾತನ್ನು ನಡೆಸಿ ಕೊಟ್ಟಿದ್ದ ಆತ ಮನೆಗೆ ಬಂದಿದ್ದ ಮತ್ತೆ ಎಂದೂ ತಿರುಗಿ ಗಡಿಯ ಕಡೆಗೆ ಹೋಗದ ಹಾಗೆ. ಆದರೆ ಮನೆಯವರ ನೆನಪಿನಲ್ಲಿ ಬದುಕುವುದಕ್ಕೆ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ