ಸ್ಟೇಟಸ್ ಕತೆಗಳು (ಭಾಗ ೬೦೯) - ನೆಮ್ಮದಿ
ದಿನವೂ ಮನೆ ಸ್ವಚ್ಛಗೊಳಿಸುತ್ತಾನೆ. ಬಂದವರು ಏನು ಅಂದುಕೊಳ್ಳಬಾರದೆಂದು. ನೋಡಿದವರು ಅಸಹ್ಯ ಪಡಬಾರದೆಂದು. ಮನೆ ಕಟ್ಟುವಾಗಲೇ ಮನೆಯ ಯಾವ ಭಾಗದಲ್ಲಿ ಏನಿರಬೇಕೆಂದು ನಿರ್ಧಾರ ಮಾಡಿದ್ದ. ಅದಕ್ಕೆ ತಿಳಿದವರ ಬಳಿ ಸಾವಿರ ಸಲ ಕೇಳಿ ನಿರ್ಧರಿಸಿದ್ದ. ಇಷ್ಟೆಲ್ಲ ಕೇಳಿ ನಿರ್ಧಾರ ಮಾಡಿದವನಿಗೆ ಮನೆಯೊಳಗಿನ ಮುನಿಸುಗಳನ್ನ ನಿಲ್ಲಿಸಬೇಕೆಂದೆನಿಸಲಿಲ್ಲ. ಎಲ್ಲದ್ದಕ್ಕೂ ರೇಗುತ್ತಾ, ಯಾರಿಗೂ ಯಾವ ಅವಕಾಶವೂ ನೀಡದೇ ಎಲ್ಲವನ್ನು ಸ್ವಂತ ನಿರ್ಧಾರದಿಂದ ನಿಭಾಯಿಸುತ್ತಾನೆ, ತಪ್ಪಿದ್ದರೂ ಸರಿಯೆಂದು ವಾಧಿಸುತ್ತಾನೆ, ಒಂದಷ್ಟು ದುಶ್ಚಟಗಳ ಅಂಟಿಸಿಕೊಂಡು ಮನೆಯವರಿಗೂ ರೋಗ ದಾಟಿಸುತ್ತಿದ್ದಾನೆ. ಊರಲ್ಲಿ ಯಾರೊಂದಿಗೆ ಸಹ ಸಂಬಂಧ ಹೊಂದದೆ ಅನಗತ್ಯ ತೊಂದರೆಗಳ ಮೂಲಕ ಊರವರಿಂದ ತಿರಸ್ಕೃತನಾಗಿದ್ದಾನೆ...
ಹೀಗಿದ್ದೂ ಸಹ ಮನೆಯನ್ನ ಸ್ವಚ್ಛಗೊಳಿಸುತ್ತಾನೆ, ಆಗಾಗ ಬಣ್ಣ ಬಳಿಯುತ್ತಾನೆ. ಮನದೊಳಗಿನ ಕೊಳೆಯ ತೆಗವುದನ್ನು ಬಿಟ್ಟು ಮನೆಯ ಗುಡಿಸಿದರೇನು ಬಂತು, ಇದೇ ಕತೆಯನ್ನ ಸತೀಶನಿಗೆ ಎಷ್ಟು ಬಾರಿ ಹೇಳಿದರೂ ಕತೆ ಕೇಳಿ ಅದ್ಭುತ ಎನ್ನುವುದನ್ನ ಬಿಟ್ಟು ಅವನೊಳಗೆ ಅಳವಡಿಸಿಕೊಳ್ಳಲಿಲ್ಲ. ಮನೆಯೊಳಗೆ ನೆಮ್ಮದಿ ಮನೆ ಮಾಡಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ