ಸ್ಟೇಟಸ್ ಕತೆಗಳು (ಭಾಗ ೬೧೨) - ಅಗತ್ಯಗಳು

ಸ್ಟೇಟಸ್ ಕತೆಗಳು (ಭಾಗ ೬೧೨) - ಅಗತ್ಯಗಳು

ಅಂದು ಸಮಯ ಸಿಕ್ಕ ಕಾರಣ ಮನೋರಂಜನೆಗೆ ಸಹೋದ್ಯೋಗಿಗಳನ್ನ ನೀರಿನ ತಾಣವೊಂದಕ್ಕೆ ಕರೆದೊಯ್ದರು. ಎತ್ತರದಿಂದ ಜಾರಿ ಬಂದು ಬೀಳುವುದು, ಉರುಳಿ ಬೀಳುವುದು, ಹಾರಿ ಬೀಳುವುದು ಹೀಗೆ ಆಟಗಳು ಸಾಗುತ್ತಿದ್ದವು. ಒಬ್ಬೊಬ್ಬರು ಒಂದೊಂದು ಕಡೆ. ಅವನು ಜಾರಿ ಬಂದು ನೀರಿಗೆ ಬಿದ್ದ ತಕ್ಷಣ ಕಣ್ಣು ಕತ್ತಲೆಯಾಯಿತು. ಹೊಟ್ಟೆಯೊಳಗೆ ನೀರು ಹೋಯಿತು, ಉಸಿರು ಕಟ್ಟಿತು ಬದುಕಬೇಕು ಅನ್ನಿಸ್ತು, ಆಗ ಯಾರೋ ಒಬ್ಬರು ಕೈ ಹಿಡಿದು ಎತ್ತಿ ನಿಲ್ಲಿಸಿ ಬದುಕಿಸಿದರು, ಅವರ್ಯಾರು ಅಂತಾನೆ ಗೊತ್ತಿಲ್ಲ, ಅಲ್ಲೇ ಮುಂದೆ ಇದ್ದ ಈಜುಕೊಳಕ್ಕೆ ಧುಮುಕಿಬಿಟ್ಟ ಆಳದ ಅರಿವಿರಲಿಲ್ಲ. ಸುಸ್ತಾಗಿ ಮುಳುಗುವಾಗ ಬದಿಗೆ ತಳ್ಳಿದವರು ಯಾರು ಗೊತ್ತಿಲ್ಲ, ಅವತ್ತು ಅವನ ಮಾವನಿಗೆ ತುರ್ತಾಗಿ ಆಸ್ಪತ್ರೆಯಲ್ಲಿ ರಕ್ತ ಕೊಟ್ಟವರ ಪರಿಚಯವಿಲ್ಲ, ಮನೆಯಿಂದ ದೂರದೂರಿನವರೆಗೆ ಕರೆದುಕೊಂಡು ಹೋದವರು, ಸಹಾಯ ಮಾಡಿದವರು, ದೊಡ್ಡ ಹೆಸರು ಮಾಡಿದ ಆತ್ಮೀಯ ಗೆಳೆಯರು, ವೈದ್ಯರೂ, ಮನೆ ಕಟ್ಟುವವರು, ಮನೆಯೊಳಗಿನ ಅಂದವನ್ನು ಹೆಚ್ಚಿಸುವುದಕ್ಕೆ ಕೆಲಸ ಮಾಡುವವರು, ಇವರೆಲ್ಲರೂ ನನ್ನ ಜೀವನದಲ್ಲಿ ಹಾದು ಹೋಗುವಾಗ ಅವನು ಅವರ ಹೆಸರು ಕೇಳಿದನೇ ವಿನಃ ಮತ್ಯಾವುದನ್ನೂ ವಿಚಾರಿಸಿದವನಲ್ಲ. ಅಗತ್ಯಗಳು ಯೋಚನೆ, ಮಾತು, ಚಿಂತನೆಗಳನ್ನ ಸಮಯಕ್ಕೆ ತಕ್ಕ ಹಾಗೆ ಬದಲಿಸುತ್ತವೆ. ಎಲ್ಲಾ ಚಿತ್ರಗಳನ್ನ ಅವರ ಬದುಕಿಗೆ ಪೂರಕವಾಗಿಯೇ ಎಲ್ಲರೂ ಚಿತ್ರಿಸಿಕೊಳ್ಳುತ್ತಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ