ಸ್ಟೇಟಸ್ ಕತೆಗಳು (ಭಾಗ ೬೧೩) - ಮಳೆ

ಸ್ಟೇಟಸ್ ಕತೆಗಳು (ಭಾಗ ೬೧೩) - ಮಳೆ

ತುಂಬಾ ಸಮಯದಿಂದ  ನೀರಿನ ಶೇಖರಣೆಯನ್ನು ಹೆಚ್ಚಿಸಿಕೊಂಡು ಮಳೆ ತನ್ನೂರಿನಿಂದ ಹೊರಟಿತು. ಅದಕ್ಕೆ ಮನೆ ಯಜಮಾನ ಹೊರಡುವಾಗಲೇ ಒಂದಷ್ಟು ವಿಳಾಸಗಳನ್ನು ನೀಡಿದ್ದ. ವಿಳಾಸಗಳ ಪಟ್ಟಿಯನ್ನು ಹಿಡಿದು ಮಳೆ ಮುಂದುವರೆಯುವುದಕ್ಕೆ ಪ್ರಾರಂಭವಾಯಿತು. ಅದಕ್ಕೆ ಸಿಕ್ಕಿರುವ ಪಟ್ಟಿಯಲ್ಲಿ ಒಂದಷ್ಟು ಊರುಗಳ ಹೆಸರಿತ್ತು. ಇನ್ನೊಂದುಷ್ಟು ಊರುಗಳ ಹೆಸರಿರಲಿಲ್ಲ. ದಾರಿಯಲ್ಲಿ ಹೋಗ್ತಾ ಇದ್ದ ಹಾಗೆ ಒಂದಷ್ಟು ಊರಿನ ಜನ ನೀರಿಗಾಗಿ ಹಾಹಾಕಾರ ಮಾಡ್ತಾ ಇದ್ರು, ಬೇಡಿಕೊಳ್ಳುತ್ತಾ ಇದ್ದರು. ಆದರೆ ಅಲ್ಲಿ ಮಳೆ ಬೀಳುವ ಹಾಗೆ ಇರಲಿಲ್ಲ. ಯಾಕೆಂದರೆ ಪಟ್ಟಿಯಲ್ಲಿ ಆ ಊರಿನ ಹೆಸರಲಿಲ್ಲ. ಕೆಲವೊಂದು ಊರುಗಳು ತುಂಬಾ ನೆಮ್ಮದಿಯಿಂದ ಆರಾಮವಾಗಿ ಬದುಕ್ತಾ ಇದ್ದವು. ಆದರೂ ಪಟ್ಟಿಯಲ್ಲಿ ಆ ಊರಿನ ಹೆಸರಿತ್ತು. ಕೆಲವೊಂದು ಊರನ್ನು ಮಾತ್ರ ಮಳೆಯಿಂದ ತಂಪು ಮಾಡಿ ಅದರ ಒಂದು ಹೆಜ್ಜೆ ಪಕ್ಕದ ಊರಿಗೂ ನೀರು ಬೀಳದ ಹಾಗೆ ಮಳೆ ತನ್ನ ಕೆಲಸವನ್ನ ಮಾಡ್ತಾ ಇತ್ತು. ಮಳೆಗೆ ಇದ್ಯಾವುದೂ ಅರ್ಥ ಆಗ್ಲಿಲ್ಲ. ಹೀಗೆ ಯಾಕೆ ಆಗ್ತಿದೆ ಅಂತ. ತನ್ನ ಕೆಲಸವನ್ನ ಮುಗಿಸಿ ಮನೆಯ ಯಜಮಾನನ ಬಳಿ ಮತ್ತೆ ಹೋಗಿ ಕೇಳಿ ನೋಡಿತು. ಅಲ್ಲ ಗುರುಗಳೇ, ನೀವು ಕೊಟ್ಟ ಪಟ್ಟಿಯಲ್ಲಿ ಒಂದಷ್ಟು ಊರುಗಳ ಹೆಸರು ತಪ್ಪಿ ಹೋಗಿತ್ತು ಯಾಕೆ ಹೀಗೆ? ಅದಕ್ಕೆ ಗುರುಗಳು ಹೇಳಿದರು ನೋಡು ಪ್ರತಿಯೊಬ್ಬರು ಅವರು ಮಾಡುವ ತಪ್ಪುಗಳ ಫಲವನ್ನ ಅನುಭವಿಸಿ ಮುಂದುವರಿತಾರೆ. ಕೆಲವೊಂದು ಊರುಗಳು ನೀರಿಲ್ಲದೆ ಹಾಹಾಕಾರ ಅನುಭವಿಸ್ತಾ ಇದ್ದಾವೆ. ಅವರಿಗೆ ಮನಸ್ಸಿಗೆ ಅರ್ಥವಾಗಬೇಕು ನೀರನ್ನು ಉಳಿಸಿಕೊಳ್ಳಬೇಕು ಅದಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡ ನಂತರವಷ್ಟೇ ನಾವು ಆ ಊರನ್ನ ಪ್ರವೇಶಿಸುತ್ತೇವೆ. ಪ್ರತಿಯೊಂದು ಊರಿನವರು ನೀರನ್ನು ಈ ಭೂಮಿಯ ಒಳಗೆ ಇಳಿಸುವುದನ್ನು ತಯಾರಿ ಮಾಡಿಟ್ಟುಕೊಂಡರೆ ನಾವು ನೇರವಾಗಿ ಆ ಊರಿನ ಕಡೆಗೆ ಹೋಗಿಬಿಡೋಣ. ಜನ ಯಾವಾಗ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೋ ಅವತ್ತು ನಾವು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡೋಣ. ಅಲ್ಲಿಯವರೆಗೆ ಒಂದಷ್ಟು ನೋವುಗಳನ್ನು ನೋಡಿ ಬದುಕೋದನ್ನ ಅಭ್ಯಾಸ ಮಾಡಿಕೋ. ಇದು ಆ ಜನರ ಒಳಿತಿಗಾಗಿ. ಮಾತುಕತೆ ನಿಂತು ಹೋಯ್ತು. ಈ ವಿಷಯ ನನಗೆ ಗೊತ್ತಾಯ್ತು ಅದಕ್ಕೆ ನಿಮ್ಮಲ್ಲಿ ಹೇಳ್ತಾ ಇದ್ದೇನೆ. ಮಳೆ ಬರಬೇಕು ಅಂತಿದ್ರೆ ನೀರನ್ನ ಉಳಿಸಿಕೊಳ್ಳುವ ಎಲ್ಲ ತಯಾರಿಗಳನ್ನ ಮಾಡಿಟ್ಟುಕೊಳ್ಳಿ ಮಳೆ ಕ್ಷಣದಲ್ಲಿ ಈ ಭೂಮಿಯ ಮೇಲೆ ಕಾಲಿಡುತ್ತೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ