ಸ್ಟೇಟಸ್ ಕತೆಗಳು (ಭಾಗ ೬೧೬) - ಸಮುದ್ರ

ಸ್ಟೇಟಸ್ ಕತೆಗಳು (ಭಾಗ ೬೧೬) - ಸಮುದ್ರ

ನೂರಕ್ಕೆ ಹನ್ನೆರಡು, ನೂರಕ್ಕೆ ಹನ್ನೆರಡು, ಜೋರಿನಲ್ಲಿ ಅವರು ಕೂಗ್ತಾ ಇದ್ರು. ದೂರದಲ್ಲಿದ್ದವರೆಲ್ಲ ಆಗಲೇ ಬಳಿಗೆ ಬಂದಾಗಿತ್ತು. ಮೀನು ಮಾರಾಟ ಸ್ವಲ್ಪ ಜೋರಾಗಿತ್ತು. ಪ್ರತಿದಿನ ಸಂಜೆಯಾಗುವಾಗ ದೋಣಿಯನ್ನು ಹಿಡಿದು ಮನೆಯ ನಾಲ್ಕು ಜನ ಸಮುದ್ರದ ಒಳಗೆ ಇಳಿದು ಬಿಡ್ತಾರೆ. ಹಾಗೆ ಹೋಗ್ತಾ ಬಲೆಗಳನ್ನು ಹಾಕಿ ಸಿಕ್ಕಿದ ಮೀನುಗಳನ್ನು ದಡಕ್ಕೆ ತಂದು ಮಾರಾಟವನ್ನು ಮಾಡಿ ಸಿಕ್ಕ ದುಡ್ಡಿನಲ್ಲಿ ಆ ದಿನಕ್ಕೆ ಬೇಕಾಗುವಷ್ಟು ಅಡುಗೆ ಪದಾರ್ಥಗಳನ್ನು ತಂದು ಬದುಕುತ್ತಾರೆ. ಸಮುದ್ರದ ಅಲೆಗಳ ಆರ್ಭಟದ ಮಧ್ಯೆ ಅವರ ಅನಿಶ್ಚಿತ ಬದುಕಿನಲ್ಲಿ ಯಾವ ಕ್ಷಣದಲ್ಲಿ  ಏನಾಗುತ್ತೋ ಅನ್ನೋದರ ಅರಿವು ಕೂಡ ಅವರಿಗಿಲ್ಲ. ಬದುಕಿನ ನಾಳೆಯ ಬಗ್ಗೆ ಕನಸುಗಳಷ್ಟೇ ಅವರ ಜೊತೆಗೆ ಇದ್ದಾವೆ. ಇನ್ನೊಂದು ನಾಲ್ಕು ಮೀನು ಹೆಚ್ಚಿಗೆ ಸಿಕ್ಕಿದರೆ ಒಂದಷ್ಟು ನಗು ಜೊತೆಯಾಗಬಹುದು.  ಈ ದಿನವೂ ಮೀನುಗಳು ಸಿಕ್ಕಿವೆ .ಆದರೆ ಪ್ರತಿದಿನವೂ ಮೀನುಗಳು ಇವರನ್ನೇ ಹುಡುಕಿಕೊಂಡು ಬರುವುದಿಲ್ಲ. ಕೆಲವೊಂದು ದಿನ ಉಪವಾಸವೇ ಬದುಕು. ಕೆಲವೊಂದು ದಿನ ಹೊಟ್ಟೆ ತುಂಬ ಊಟ. ಯಾವುದೂ ಕೂಡ ಶಾಶ್ವತವಲ್ಲ. ಕನಸುಗಳೆಲ್ಲವೂ ಹಾಗೆ ಸಮುದ್ರದ ಒಳಗೆ ಚಲಿಸುತ್ತವೆ. ಅದೇ ಪ್ರಪಂಚವಾಗಿ ಬಿಟ್ಟಿದೆ. ಯಾರ ಬದುಕು ಯಾವ ಕ್ಷಣದಲ್ಲಿ ಹೇಗೆ ಬದಲಾಗುತ್ತೋ ಅವರು  ಕಾಯುತ್ತಿದ್ದಾರೆ. ಕೆಲವೊಂದು ಸಲ ಕನಸುಗಳು ಸಮುದ್ರದೊಳಗೆ ಚಲಿಸುತ್ತವೆ ಹೆಚ್ಚು ಮೀನು ಸಿಕ್ಕಿದ್ರೆ ಕನಸುಗಳು ಬದುಕುತ್ತವೆ. ಇಲ್ಲದಿದ್ದರೆ ಪ್ರತಿದಿನವೂ ಸಮುದ್ರದೊಳಗೆ ಸಾಯುತ್ತವೆ. ಹಾಗಾಗಿ ಒಂದೆರಡು ಕನಸುಗಳು ಇವತ್ತು ಉಸಿರಾಡಬಹುದು ಅನ್ನಿಸ್ತು..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ