ಸ್ಟೇಟಸ್ ಕತೆಗಳು (ಭಾಗ ೬೧೭) - ಬೆಳಕು

ಸ್ಟೇಟಸ್ ಕತೆಗಳು (ಭಾಗ ೬೧೭) - ಬೆಳಕು

ಆತ ಬೆಳಕನ್ನು ನೀಡುತ್ತಿದ್ದ, ಸೂರ್ಯದೇವನಲ್ಲ. ಆದರೆ ರಂಗಭೂಮಿಯಲ್ಲಿ ಅಭಿನಯಿಸುವವರಿಗೆ ಅವರ ಅಭಿನಯ ಜನರಿಗೆ ಕಾಣುವುದಕ್ಕೆ ಆತ ಬೆಳಕಿನ ವಿನ್ಯಾಸ ಮಾಡುತ್ತಿದ್ದ. ಬಗೆಬಗೆಯ ಬಣ್ಣಗಳಿಂದ ಭಾವಗಳು ಮೈದುಂಬಿ ವೇದಿಕೆಯನ್ನ ದಾಟಿ ಜನರ ಹೃದಯವನ್ನು ತಲುಪಿದ್ದವು. ಆತ ಅದನ್ನ ಪ್ರತಿದಿನ ತರಗತಿಗೆ ಹೋಗಿ ಅಭ್ಯಾಸ ಮಾಡಿ ಕಲಿತವನಲ್ಲ. ಆ ರಂಗ ವೇದಿಕೆಯಲ್ಲಿ ಬಂದ ಒಂದೊಂದು ನಾಟಕದಲ್ಲಿ ಒಂದೊಂದು ರೀತಿಯ ವಿನ್ಯಾಸವನ್ನು ಗಮನಿಸಿ ತಾನು ಅದನ್ನ ಅಭ್ಯಾಸ ಮಾಡಿ ಒಬ್ಬ ಒಳ್ಳೆಯ ಬೆಳಕಿನ ವಿನ್ಯಾಸಗಾರ ಎನಿಸಿಕೊಂಡಿದ್ದಾನೆ. ವಯಸ್ಸು ಅಷ್ಟೇನು ದೊಡ್ಡದಲ್ಲ ಹುಡುಗಾಟದ ವಯಸ್ಸು .ಬಂದ ದುಡ್ಡನ್ನ ಮನೆಗೊಂದಿಷ್ಟು ಕೊಟ್ಟು ತನ್ನ ವೈಯಕ್ತಿಕಕ್ಕೆ ಬೇಕಾದ ಹಾಗೆ ಖರ್ಚು ಮಾಡಿಕೊಳ್ಳುತ್ತಾನೆ. ಆದರೆ ಆ ದಿನ ಎಂದಿನಿಗಿಂತಲೂ ಒಂದಷ್ಟು ವೇಗವಾಗಿ ಬೈಕನ್ನು ಚಲಾಯಿಸ್ತಾ ಇದ್ದ ಹೋಗುವ ದಾರಿ ದಿಕ್ಕು ತಪ್ಪಿತೋ ಏನೋ ಕಾಲನಿಗೆ ತನ್ನರಮನೆಯಲ್ಲಿ ಬೆಳಕಿನ ವಿನ್ಯಾಸ ಮಾಡುವವರು  ಬೇಕಾಗಿದ್ದಾರೆ ಅನ್ನಿಸಿತು. ಹಾಗಾಗಿ ಆತನನ್ನ ನೇರವಾಗಿ ತನ್ನ ಬಳಿಗೆ ಕರೆದುಕೊಂಡುಬಿಟ್ಟ. ಗಾಡಿಯಪ್ಪಳಿಸಿ ದೇಹ ಮೇಲಕ್ಕೆತ್ತಿ ನೆಲಕ್ಕೆ ಬಡಿದಾಗ ಜೀವ ಹೋಗಿತ್ತು. ಆತ ಮತ್ತೆಂದು ಮಾತನಾಡದವನಾಗಿ ಬಿಟ್ಟ. ಅಲ್ಲಿ ಮೌನವೇ ಬದುಕಾಗಿತ್ತು ಬಂದವರೆಲ್ಲರೂ ಕಣ್ಣೀರನ್ನು ಇಳಿಸಿ ಸುಮ್ಮನೆ ನಿಂತು ನೋಡುತ್ತಿದ್ದರು. ಆತ ಇಷ್ಟು ದಿನ ಮಾಡಿದ ಕೀಟಲೆಗಳು ಮಾತುಕತೆ, ಹೊಸ ಮಾತು ಕನಸು ಎಲ್ಲವೂ ಅವರೊಳಗೆ ಹಾಗೆ ಉಳಿದುಕೊಂಡು ಬಿಟ್ಟಿದ್ದವು. ಎಲ್ಲರಿಗೂ ಬೆಳಕು ನೀಡಿ ವೇದಿಕೆಯಲ್ಲಿ ಮಿಂಚುವ ಹಾಗೆ ಮಾಡುತ್ತಿದ್ದವ ಇಂದು ಕತ್ತಲ ಕೋಣೆಯೊಳಗೆ ಮುಳುಗಿದ್ದಾನೆ. ಬೆಳಕು ಬೇಕೆಂದರು ಆತನಿಗೆ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆತ ಬೆಳಕಿನೊಳಗೆ ಸುಡುತ್ತಿದ್ದಾನೆ. ಅದರಿಂದಲಾದರೂ ಸುತ್ತಮುತ್ತ ಒಂದಷ್ಟು ಬೆಳಕು ನೀಡುವ ಉದ್ದೇಶದಿಂದ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ