ಸ್ಟೇಟಸ್ ಕತೆಗಳು (ಭಾಗ ೬೧೯) - ಪರಿಸ್ಥಿತಿ

ಮನೆಯ ಒಳಗೆ ಕೂತು ನಲ್ಲಿ ತಿರುಗಿಸಿದರೆ ನೀರು ಬರ್ತಾ ಇಲ್ಲ. ಮನೆ ಅಂಗಳದ ಬಾವಿಯಲ್ಲಿ ನೀರು ನೆಲವನ್ನ ದಾಟಿ ಭೂಮಿಗೆ ಇಳಿದು ಹೋಗಿಬಿಟ್ಟಿದೆ.ವಾರಕ್ಕೊಮ್ಮೆ ಬರುವ ನೀರು ಕೆಂಪು ಬಣ್ಣವನ್ನ ಪಡೆದುಕೊಂಡಿದೆ .ಗಿಡಮರಗಳೆಲ್ಲ ಮನುಷ್ಯರನ್ನ ನಂಬೋಕಾಗದೆ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿವೆ .ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳು ನೀರಿಗೋಸ್ಕರ ದಿನಗಳ ದಿನಚರಿಯನ್ನೇ ಬದಲಿಸಿಕೊಂಡಿದ್ದಾವೆ. ಎಲ್ಲವೂ ಆಗಿರೋದು ನೀರಿನಿಂದಾಗಿ .ಆ ಊರಿನಲ್ಲಿ ಬೇಸಿಗೆಕಾಲ ಬಂತಂದ್ರೆ ಸಾಕು ಎಲ್ಲರೂ ಬದುಕಿನ ದಾರಿಗಳನ್ನ ಬದಲಿಸಿಕೊಳ್ಳುತ್ತಾರೆ. ಬದುಕೋದು ಹೇಗೆ ಅಂತ ಯೋಚನೆ ಮಾಡಿಕೊಳ್ಳೋದಕ್ಕೆ ಆರಂಭ ಮಾಡುತ್ತಾರೆ. ಇಷ್ಟೆಲ್ಲಾ ಆಗುವಾಗ ನನಗೆ ತಡೆದುಕೊಳ್ಳಲಾಗಲಿಲ್ಲ. ನೋಡು ದೇವರೇ ನಿನ್ನನ್ನು ನಾವೆಲ್ಲ ಭಕ್ತಿಯಿಂದ ಪೂಜಿಸ್ತೇವೆ ಆರಾಧಿಸುತ್ತೇವೆ ಪ್ರಾರ್ಥಿಸುತ್ತೇವೆ. ಆಗಾಗ ನಿನಗೆ ಬೇಕಾಗಿರುವ ಹೊಸ ಹೊಸ ರೀತಿಯ ಆಚರಣೆಗಳನ್ನು ಮಾಡುತ್ತವೆ ನಾವೆಲ್ಲರೂ ಜೊತೆಯಾಗುತ್ತೇವೆ ಹಾಗಿದ್ದರೂ ಕೂಡ ನಿನಗೆ ನಮ್ಮ ನೆಲದ ಮೇಲೆ ಒಂದಿನಿತೂ ಕರುಣೆ ಇಲ್ಲವಲ್ಲ ಯಾಕೆ?" ಅದಕ್ಕೆ ಉತ್ತರ ಸಿದ್ಧವಾಗಿತ್ತು "ಮಳೆ ಬರೋದಕ್ಕಿಂತ ಮುಂಚೆಯೇ ಮಳೆ ಬರುವ ಸೂಚನೆಯನ್ನು ಬೇರೆ ಬೇರೆ ರೂಪದಲ್ಲಿ ನೀಡುತ್ತಾ ಬಂದಿದ್ದೆ, ಆದರೆ ನೀನು ಅದನ್ನು ಗಮನಿಸಲಿಲ್ಲ ಮಳೆ ಹನಿಯಿಂದ ಜೋರಾಗ್ತಾ ಹೋದ ಹಾಗೆ ಅದರ ಅದ್ಭುತವಾದ ಚಿತ್ರಗಳನ್ನು ಹಿಡಿದು ಒಂದಷ್ಟು ಜನರಿ ಕಳುಹಿಸಿ ನೀನೇನೋ ಅದ್ಬುತ ಚಿತ್ರಗಾರ ಎಂದೆನಿಸಿಕೊಂಡೆ ಇಷ್ಟಾಗುವ ನಿನಗೆ ಹರಿಯುವ ನೀರನ್ನು ನಿಲ್ಲಿಸಬೇಕು ಅಂತ ಅನ್ನಿಸಲಿಲ್ಲ ಭೂಮಿಯೊಳಗೆ ಇಳಿಸೋಕೆ ಹಲವಾರು ಅವಕಾಶಗಳು ಇದ್ರೂ ಕೂಡ ನೀನು ಅದನ್ನು ಎಲ್ಲೂ ಕೂಡ ಬಳಕೆ ಮಾಡಿಕೊಳ್ಳಲಿಲ್ಲ ನೀನು ಮಾಡಬೇಕಾದ ಒಂದು ಕೆಲಸವನ್ನ ಸರಿಯಾಗಿ ಮಾಡಬೇಕು ಈಗ ನೀರಿಗೋಸ್ಕರ ಕೈಮುಗಿದು ನನ್ನಲ್ಲಿ ಬೇಡಿದರೆ ನಾನೆಲ್ಲಿಂದ ಅಂತ ನೀಡಲಿ ನಾನು ನಿಮ್ಮೂರಿಗೆ ನೀರು ಕಳಿಸಬೇಕು ಅಂತ ಪತ್ರ ಬರೆದರೆ ಆ ಊರಿನ ಜನ ನೀರಿಗೋಸ್ಕರ ಏನು ಮಾಡಿದ್ದಾರೆ ಅಂತ ನನ್ನ ಯಜಮಾನರು ನನ್ನತ್ರ ಕೇಳುತ್ತಾರೆ ಹಾಗಾಗಿ ನಿನಗೆ ನೀರು ಕಳಿಸುವುದಕ್ಕೆ ಆಗುವುದಿಲ್ಲ". ಅಂತ ಅಂದು ದೇವರು ಮೌನವಾಗಿ ಬಿಟ್ಟರು. ಅದೇ ಮೌನ ಹೆಚ್ಚಾಗುತ್ತಾ ಹೋದರೆ ನಾವೆಲ್ಲರೂ ಮೌನದಲ್ಲಿ ಬದುಕಿ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾದೀತು… ಪರಿಹಾರ ಏನು?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ