ಸ್ಟೇಟಸ್ ಕತೆಗಳು (ಭಾಗ ೬೨೨) - 620

ಶಾಲೆಯ ಆರಂಭಕ್ಕೆ ಮೊದಲೇ ಅವಳು ತನ್ನ ಬ್ಯಾಗ್ ತಯಾರಿ ಮಾಡಿಕೊಳ್ಳುತ್ತಿದ್ದಾಳೆ, ನಾಳೆ ಶಾಲೆಯೊಳಗೆ ಏನೆಲ್ಲಾ ಕಲಿಸಬಹುದು ಅನ್ನುವ ಕುತೂಹಲದಲ್ಲಿ ಪುಸ್ತಕಗಳನ್ನ ತುಂಬಿಸುತ್ತಿದ್ದಾಳೆ. ಪೆನ್ನು ಪೆನ್ಸಿಲ್ ರಬ್ಬರ್ ಎಲ್ಲವನ್ನು ಕೂಡ ಜೋಡಿಸಿಕೊಳ್ಳುತ್ತಿದ್ದಾಳೆ. ಅವಳಿಗೆ ಗೊತ್ತಿದೆ ಈ ವರ್ಷ ತನ್ನದು 10ನೇ ತರಗತಿ. ಈ ವರ್ಷ ತಾನು ಪಡೆಯುವ ಅಂಕ ಒಂದಷ್ಟು ಹೊಸ ಆಲೋಚನೆಗಳನ್ನ ಹೊಸ ಕನಸುಗಳನ್ನು ತುಂಬುತ್ತವೆ. ಮನೆಯವರಿಗೆ ಒಂದಷ್ಟು ಧೈರ್ಯ ಸಿಗುವಂತಹ ಫಲಿತಾಂಶ ನನ್ನದಾಗುತ್ತದೆ. ಅದಕ್ಕೋಸ್ಕರ ಮನಸ್ಪೂರ್ತಿಯಿಂದ ಆಕೆ ತನ್ನ ಕೋಣೆಯ ಗೋಡೆಯ ಮೇಲೆ ದೊಡ್ಡದಾಗಿ ತಾನು ಈ ವರ್ಷ ಸಂಪಾದಿಸಿಕೊಳ್ಳಬೇಕಾದ ಅಂಕವನ್ನು ನಿಗದಿಪಡಿಸಿದ್ದಾಳೆ ಅದು 620. ಪ್ರತಿಯೊಂದು ವಿಷಯಗಳಿಗೂ ಇಂತಿಷ್ಟೇ ಅಂಕಗಳು ಸಿಗಬೇಕು ಅಂತ ನಿರ್ಧರಿಸಿದ್ದಾಳೆ. ಕೆಲವೊಂದು ವಿಚಾರಗಳು ಆಕೆಗೆ ಸ್ವಲ್ಪ ಕಷ್ಟವಾದವು. ಕೆಲವೊಂದರಲ್ಲಿ ಪೂರ್ತಿ, ಕೆಲ ಒಂದರಲ್ಲಿ ಎರಡು ಒಂದು ಅಂಕಗಳು ಕಡಿಮೆಯಾಗಿ ಗುರುತಿಸಿದ್ದುಕೊಂಡಿದ್ದಾಳೆ. ಆಕೆ ಗುರುತಿಸಿರುವುದು ಮಾತ್ರವಲ್ಲ 9ನೇ ತರಗತಿ ಮುಗಿದ ಮರುದಿನದಿಂದಲೇ 10ನೇ ತರಗತಿಯ ಪುಸ್ತಕವನ್ನು ಓದಲು ಆರಂಭಿಸಿದ್ದಾಳೆ. ಅದರ ಹಿನ್ನೆಲೆ ಮುನ್ನೆಲೆಗಳನ್ನು ಸಿಕ್ಕಿದವರ ಬಳಿ ಎಲ್ಲ ಚರ್ಚಿಸಿದ್ದಾಳೆ. ಶಾಲೆಯಲ್ಲಿ ಶುರುವಾಗುವುದಕ್ಕಿಂತ ಮೊದಲೇ ಆಕೆ ಪಾಠವನ್ನು ಆರಂಭಿಸಿದ್ದಾಳೆ. ತನ್ನ ಫಲಿತಾಂಶಕ್ಕೆ ಪೂರಕವಾದ ವಿಚಾರಗಳನ್ನ ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ. ಆಕೆಯ ಮನಸ್ಸಿನಲ್ಲಿ ದೃಢಸಂಕಲ್ಪ ಒಂದು ಮಾತ್ರ ಉಳಿದಿದೆ ತಾನು ಅಂಕವನ್ನ ಗಳಿಸಲೇಬೇಕು . ಈ ಯೋಚನೆ ಅವಳ ಮನಸ್ಸಿನಲ್ಲಿ ಮೂಡುವುದಕ್ಕೆ ಕಾರಣವೆಂದರೆ ಆಕೆ ಸಾಹಿತ್ಯ, ಕ್ರೀಡೆಯಲ್ಲಿ ಒಂದಷ್ಟು ಹೆಸರು ಗಳಿಸಿದವಳು, ಬೇರೆ ಬೇರೆ ಊರುಗಳಿಗೆ ಹೋಗಿ ಸಂಸ್ಕೃತಿಕ ಪ್ರದರ್ಶನವನ್ನು ನೀಡಿದವಳು. ಹೆಚ್ಚಿನ ಜನ ಎಲ್ಲರೂ ಕೂಡ ಅವಳನ್ನ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರ ಬಗ್ಗೆ ಗುರುತಿಸುತ್ತಾರೆ ಮಾತನಾಡಿಸುತ್ತಾರೆ ಗೌರವಿಸುತ್ತಾರೆ. ಆದರೆ ಅವಳ ಶಾಲೆಯ ಅಂಕಗಳ ಬಗ್ಗೆ ಯಾರು ಇಷ್ಟರವರೆಗೆ ಸಣ್ಣ ವಿಚಾರವನ್ನು ಮಾತನಾಡಿದವರಲ್ಲ. ಅವಳಿಗೊಂದು ಆಸೆ ತನ್ನ ಮನೆಯವರನ್ನ ಮತ್ತು ಅವಳನ್ನ ಅವಳು ಪಡೆದ ಅಂಕಗಳಿಗೋಸ್ಕರ ಗುರುತಿಸಬೇಕು ಅಂತ ಮತ್ತು ಎಲ್ಲದರಲ್ಲೂ ತೊಡಗಿಸಿಕೊಂಡಿರುವವರಿಗೆ ಅಂಕವನ್ನು ಗಳಿಸುವುದಕ್ಕೆ ಸಾಧ್ಯ ಇದೆ ಅಂತ ತೋರಿಸಿಕೊಡಬೇಕು, ಅದಕ್ಕೋಸ್ಕರ ತನ್ನ ಕೋಣೆಯಲ್ಲಿ ದೊಡ್ಡದಾಗಿ ಬರೆದಿಟ್ಟುಕೊಂಡಿದ್ದಾಳೆ. ಇದು ಬರಿಯ ಬರವಣಿಗೆ ಮಾತ್ರವಲ್ಲ ಆಕೆಯ ದೃಢ ವಿಶ್ವಾಸ ಪ್ರಾಮಾಣಿಕತೆಗೆ ಮುಂದೊಂದು ದಿನ ಸಿಗುವ ಪ್ರತಿಫಲ. ಆಶಯ ಇಷ್ಟೇ ಅವಳ ಮನಸ್ಸಿನ ಭಾವನೆಗಳು ನೆರವೇರಲಿ ಜೊತೆಗೆ ಭವಿಷ್ಯದ ಬಗ್ಗೆ ಅವಳು ಕಾಣುತ್ತಿರುವ ಗುರಿಯ ಸ್ಪಷ್ಟತೆ ನಮ್ಮೊಳಗೂ ಒಂದಿಷ್ಟು ಮೂಡಲಿ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ