ಸ್ಟೇಟಸ್ ಕತೆಗಳು (ಭಾಗ ೬೨೬) - ಕ್ಷಣಿಕ

ಸಂಭ್ರಮ ಒಂದನ್ನು ಎದುರುಗೊಳ್ಳಲು ದೂರದೂರಿಗೆ ಹೋಗಲು ಬಸ್ಸನ್ನೇರಿದ್ದೆ. ಬಸ್ಸು ತನ್ನ ವೇಗವನ್ನ ವೃದ್ಧಿಸಿಕೊಂಡು ಕೆಲವೇ ನಿಮಿಷಗಳಾಗಿತ್ತಷ್ಟೇ. ಚಕ್ರಗಳು ಹತ್ತರಿಂದ ಹನ್ನೆರಡು ಸುತ್ತುಗಳನ್ನು ಸುತ್ತಿದ್ದವಷ್ಟೇ, ಆಗಲೇ ಜೋರಾಗಿ ಅಳುವ ಶಬ್ದ. ಈ ಬಸ್ಸಿನ ಒಳಗಡೆ ಅಂತಹ ನೋವನ್ನು ಅನುಭವಿಸುತ್ತಿರುವವರು ಯಾರು? ಆ ಕಡೆ ಈ ಕಡೆ ನೋಡುವಾಗ ಬಸ್ಸಿನ ಮುಂದುಗಡೆ ಸೀಟಿನಲ್ಲಿ ಕುಳಿತಿದ್ದ ಆ ಹೆಣ್ಣು ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಬಸ್ಸನ್ನೇರುವಾಗ ನನ್ನನ್ನು ನೋಡಿ ನಕ್ಕು ಮುಂದುವರೆದಿದ್ದವರು ಅವರು. ಈಗೇನಾಯ್ತು? ಆ ಕ್ಷಣದಲ್ಲಿ ಅವರ ಅಳು ಜೋರಾಯಿತು. ನೆಲದಲ್ಲಿ ಬಿದ್ದೇ ಬಿಟ್ಟರು . ಬಳಿ ಹೋಗಿ ಎಬ್ಬಿಸಿ ಕುಳ್ಳಿರಿಸಿ ಸಾವರೆಸಿ ಕೇಳಿದರೂ ಅವರ ಬಾಯಿಂದ ಮಾತು ಹೊರಡಲಿಲ್ಲ. "ದಾವಣಗೆರೆ ಅಮ್ಮಾ" ಅನ್ನುವ ಎರಡು ಮಾತನ್ನ ಬಿಟ್ಟು. ಯಾವುದೋ ಕೆಟ್ಟ ಸೂಚನೆ, ಮನಸ್ಸಿನೊಳಗೆ ಸಣ್ಣ ವೇದನೆ ಉಂಟಾದಂತಾಗಿ, ಗಾಡಿ ನಿಲ್ಲಿಸಿ ಕಾರೊಂದನ್ನು ಗೊತ್ತು ಮಾಡಿ ಅವರನ್ನು ಅದರೊಳಗೆ ಕೂರಿಸಿ ದಾವಣಗೆರೆಗೆ ಕಳುಹಿಸಿಕೊಟ್ಟೆವು. ಅಮ್ಮನಿಗೆ ಮೈ ಹುಷಾರಿಲ್ಲ ಮನೆಗೆ ಬಾ ಅಂತ ಮನೆಯಿಂದ ಕರೆ ಬಂದಿದೆ. ಮೈ ಹುಷಾರಿಲ್ಲದ ಅಮ್ಮನ ಆರೋಗ್ಯ ವಿಚಾರಿಸಲು ಹೊರಟ ಅವರಿಗೆ ಅಮ್ಮನೊಂದಿಗೆ ಮಾತನಾಡವುದ್ದಕ್ಕೂ ಅವಕಾಶವು ಸಿಗಲಿಲ್ಲ. ನಶ್ವರತೆ ಅನ್ನೋದು ಆಗಾಗ ಜೀವನದಲ್ಲಿ ಹಾದು ಹೋಗುತ್ತಾ ಇರುತ್ತದೆ. ನನಗೂ ಮೈಯಲ್ಲಿ ಒಂಥರಾ ಭಯ ದೇಹದಿಂದ ಬೆವರು ಹೊರಬರುವುದಕ್ಕೆ ಆರಂಭವಾಯಿತು. ತಕ್ಷಣವೇ ನನ್ನ ಮನೆಗೆ, ಬಂದು ಬಳಗದವರಿಗೆ, ಗೆಳೆಯರಿಗೆ ಆನೇಕರಿಗೆ ಕರೆ ಮಾಡಿ ಸುಮ್ಮನೆ ಮಾತನಾಡಿದೆ. ಒಂದಿಷ್ಟು ಸಮಾಧಾನ ಆದರೂ ಮುಂದೆ ಏನಾಗುತ್ತೆ ಅನ್ನುವ ಭಯ ಈಗಲೂ ಮನಸ್ಸಿನೊಳಗೆ ಹಾಗೆ ನಿಂತುಬಿಟ್ಟಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ