ಸ್ಟೇಟಸ್ ಕತೆಗಳು (ಭಾಗ ೬೨೭) - ಹಳಿ

ಸ್ಟೇಟಸ್ ಕತೆಗಳು (ಭಾಗ ೬೨೭) - ಹಳಿ

ಕನಸು ಆಸೆ ಆಕಾಂಕ್ಷೆಗಳೆಲ್ಲವೂ ಹಳಿ ತಪ್ಪಿ ಮಲಗಿದೆ. ಪಯಣ ಆರಂಭಿಸಿದವರಿಗೆ ತಲುಪುವ ಬಗ್ಗೆ ತುಂಬಾ ನಿಚ್ಚಳವಾದ ಯೋಚನೆಯಿತ್ತು. ದಾರಿಯಲ್ಲಿ ಹೋಗ್ತಾ ಹಲವಾರು ಕನಸುಗಳನ್ನು ಕಂಡಿದ್ದರು, ಹಲವಾರು ಕರೆಗಳು ಅವರ ಮನೆಗಳನ್ನು ತಲುಪಿದ್ದವು. ಇನ್ನೊಂದಷ್ಟು ಜನ ಅವರ ಭೇಟಿಗಾಗಿ ಅವರ ನಿಲ್ದಾಣದಲ್ಲಿ ಕಾಯುತ್ತಾನೂ ಇದ್ದರು. ಇಷ್ಟೆಲ್ಲ ಆಗುತ್ತಾ ಇರುವಾಗ ಮಧ್ಯದಲ್ಲಿ ಯಾರೋ ಮಾಡಿದ ಒಂದು ತಪ್ಪಿನಿಂದಾಗಿ ಹಲವಾರು ಜೀವಗಳು ತಮ್ಮ ಪ್ರಾಣವನ್ನು ಕಳೆದುಕೊಂಡವು. ಅಷ್ಟೇ ಅಲ್ಲ ಕಳೆದುಕೊಂಡವರ ಲೆಕ್ಕದಲ್ಲಿ ಯಾವುದೇ ಜಾತಿವಾರು ವಿಭಾಗ ಯಾರು ಮಾಡ್ಲಿಲ್ಲ, ರಕ್ತ ಕೊಡುವಾಗಲು ಜಾತಿಗೊಂದು ರಕ್ತವನ್ನು ಯಾರು ನೀಡಲಿಲ್ಲ. ಆ ಪಯಣದಲ್ಲಿ ಜೊತೆಯಾಗಿದ್ದ ಮಗಳನ್ನು ಕಳೆದುಕೊಂಡು ತಂದೆ ಮೌನವಾಗಿದ್ದಾರೆ. ದೂರದ ಶಾಲೆಯಿಂದ ಮಗಳನ್ನು ಮನೆಗೆ ಕರೆದುಕೊಂಡು ಹೊರಟಿದ್ದಾರೆ. ಆಕೆಗೆ ಇಷ್ಟವಾದ ಹಲವಾರು ತಿಂಡಿ ತಿನಿಸುಗಳು ಜೊತೆಗಿದ್ದಾವೆ. ಆದರೆ ಮಗಳಿಲ್ಲ. ಈಗ ಸುತ್ತ ನಿಂತವರು ಕಂಬನಿ ಹರಿಸಿದ್ದಾರೆ, ಸಂತಾಪ ಸೂಚಿಸಿದ್ದಾರೆ. ಜೊತೆ ಇದ್ದೇವೆ ಅಂತ ಭರವಸೆ ನೀಡಿದ್ದಾರೆ. ಆದರೆ ಕನಸುಗಳನ್ನೇ ತುಂಬಿಕೊಂಡ ಮಗಳು ಜೊತೆಗಿಲ್ವಲ್ಲ .ಇದನ್ನ ಯಾರ ಬಳಿ ಅಂತ ಕೇಳುವುದು. ತಂದೆ ಇನ್ನು ಹುಡುಕುತ್ತಿದ್ದಾರೆ ಕೊನೆಯ ಬಾರಿ ಮಗಳ ಮುಖವನ್ನಾದರೂ ನೋಡೋಣ ಅಂತ. ಭಗವಂತನ ಇಚ್ಛೆ ಏನಿದೆಯೋ ಗೊತ್ತಿಲ್ಲ… ಪಯಣ ನಿರಂತರ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ