ಸ್ಟೇಟಸ್ ಕತೆಗಳು (ಭಾಗ ೬೨) - ಸಂಸಾರಿ?
ಅವಳು ಜೀವ ನೀಡುವವಳು. ಜೀವವೊಂದನ್ನು ಉದರದೊಳಗೆ ಪೋಷಿಸಲಾರಂಬಿಸುವಾಗ ನಾನು ಜೊತೆಗಿರಬೇಕು. ಅವಳ ಬಯಕೆಗಳು ಏನು ಎಂಬುದು ನನಗೆ ತಿಳಿಯಬೇಕಾದರೆ ನಾನು ಅವಳ ಕೈ ಹಿಡಿದಾಗಿನಿಂದ ಅವಳನ್ನ ಅರ್ಥೈಸಿಕೊಂಡಿರಬೇಕು. ಅವಳ ಮನಸ್ಸಿನ ಆಳ ಸಿಗುವುದು ಕಷ್ಟವಾದರೂ, ಅವಳು ಮೌನವೇಕೆ? ಅವಳ ಆಸೆಗಳೇನು? ಮಾತೇಕೆ ಕಡಿಮೆ ಮಾಡಿದ್ದಾಳೆ? ಇದೆಲ್ಲದಕ್ಕೂ ಉತ್ತರ ಹುಡುಕಬೇಕು.
" ಅವಳ ಜವಾಬ್ದಾರಿ ಅವಳೇ ನಿಭಾಯಿಸಲಿ" ಅನ್ನೋನಿಗೆ ಅವಳೊಂದಿಗೆ ರಾತ್ರಿಯನ್ನು ಕಳೆಯುವ ಹಕ್ಕಿರುವುದಿಲ್ಲ. ಅವಳ ಕಣ್ಣಂಚಿನ ನೋವು, ತುಟಿಯ ಮರೆಯ ಮಾತು, ಹೊಟ್ಟೆಯ ಬಾರ ನನ್ನ ಮನಸ್ಸಿಗೆ ಅರ್ಥವಾದರೆ ಏಳು ಹೆಜ್ಜೆಗೆ ಸಾರ್ಥಕ. ಮೂರು ಗಂಟಿಗೆ ಅರ್ಥ. ಅವಳಿಗೆ ನಿದ್ದೆಯಿರದ ರಾತ್ರಿಯಲ್ಲಿ ಜೋಗುಳವಾಗಬೇಕು, ಕಾಲಿನ ಸೆಳೆತಕ್ಕೆ ಮೃದು ಸ್ಪರ್ಶವಾಗಬೇಕು. ಒತ್ತಡಗಳಿಗೆ ಜೊತೆಗೆ ನಿಂತು ಹೆಗಲಾಗಬೇಕು. ಹಣೆಗೊಂದು ಮುತ್ತು , ಭದ್ರತೆಯ ಕೈ ಹಿಡಿಯಬೇಕು. ಪರಮ ಯಾತನೆಯ ಪ್ರಸವ ಸುಖದಲ್ಲೂ ನೋವಿನ ನಡುವಿನ ಸಂತಸದ ಕಣ್ಣೀರ ಹನಿಯನ್ನು ಒರೆಸಿ ಪಕ್ಕದಲ್ಲಿ ಕುಳಿತುಕೊಳ್ಳಬೇಕು. ಮನೆಯ ತೊರೆದು ಮನವ ತುಂಬಲು ಬಂದವಳ ನಿಜದ ಬೆಂಬಲವಾಗಿ ನಿಲ್ಲುವೆನಾದರೆ ಮಾತ್ರ ನಾನು ಸಂಸಾರಿ ಆಗಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ