ಸ್ಟೇಟಸ್ ಕತೆಗಳು (ಭಾಗ ೬೩೦) - ಕಾರ್ಖಾನೆ

ದೊಡ್ಡದೊಂದು ಕೋಣೆ ಅಲ್ಲೊಂದು ಆ ಕೋಣೆಯೊಳಗೆ ಫ್ಯಾನ್ ತಿರುಗುತ್ತಾ ಇದೆ. ಆ ಕೋಣೆಯೊಳಗೆ ಇರುವವರಿಗೆ ಗಾಳಿ ನೀಡುವುದಕ್ಕಲ್ಲ, ತನ್ನನ್ನ ಜೋಡಿಸಿದ್ದಾರೆ ಆ ಕಾರಣಕ್ಕೆ ಆ ಕೆಲಸವನ್ನಷ್ಟೇ ನಿರ್ವಹಿಸುತ್ತಿದೆ. ಆ ಗಾಳಿಯನ್ನು ಪಡೆದುಕೊಳ್ಳೋಕೆ ಆ ಕೋಣೆಯಲ್ಲಿ ಮಲಗಿರುವ ಜನರಿಗೆ ಒಂದಿನಿತೂ ಜೀವವಿಲ್ಲ. ಅವರೆಲ್ಲರೂ ತಮ್ಮ ಪ್ರಾಣವನ್ನ ಕಳೆದುಕೊಂಡವರು. ಅದೊಂದು ಘಟನೆ ಯಾರದೋ ತಪ್ಪಿಗೆ ಹಲವರ ಪ್ರಾಣ ಬಲಿಯಾಗಿ ಹೋದವು, ಕ್ಷಣದವರೆಗೂ ಕನಸುಗಳನ್ನು ಕಂಡಿದ್ದ ವರಿಗೆ ಮುಂದೊಂದು ಕ್ಷಣ ಉಸಿರು ನಿಲ್ಲಿಸುವ ಯೋಚನೆಯೂ ಇರಲಿಲ್ಲ. ಅಲ್ಲಿ ಬಂದ ಹಲವಾರು ಜನ ಹೆಜ್ಜೆಗಳನ್ನಿಡುತ್ತಾ ಇಡುತ್ತಾ ತಮ್ಮವರ ಮುಖಗಳನ್ನು ಹುಡುಕುತ್ತಿದ್ದಾರೆ. ಮಲಗಿರುವ ಪ್ರತಿಯೊಬ್ಬರ ಮುಖ ಪರದೆಗಳನ್ನ ಸರಿಸಿ ಇವರು ನಮ್ಮವರು ಹೌದು ಅಲ್ಲವೋ ಹೌದೋ ಅಲ್ಲವೋ ಅನ್ನುವ ದೃಷ್ಟಿಯನ್ನ ಇಡುತ್ತಾ ಇಡುತ್ತಾ ಬದುಕಿನ ನಶ್ವರತೆಯನ್ನ ಅರ್ಥ ಮಾಡಿಕೊಂಡುಬಿಟ್ಟಿದ್ದಾರೆ. ಪ್ರತಿಯೊಬ್ಬರ ಮುಖದಲ್ಲಿ ಭಯವಿದೆ ಆತಂಕವಿದೆ ಆಶ್ಚರ್ಯವಿದೆ ಅದರ ಜೀವವಿಲ್ಲ ತಮ್ಮವರ ಮುಖ ನೋಡಿದ ತಕ್ಷಣ ಸಂಭ್ರಮವೇನಿಲ್ಲ ದುಃಖ ಮಡುಗಟ್ಟಿ ಎಲ್ಲ ಸಾವಿಗೂ ಸೇರಿಕೊಂಡು ಜೋರಾಗಿ ಅಳುತ್ತಿದ್ದಾರೆ. ತಮ್ಮವರ ಕಣ್ಣೀರು ಒರೆಸಲು ಮಲಗಿದವರಿಗೆ ಸಾಧ್ಯವಾಗುತ್ತಿಲ್ಲ. ಒಂದಷ್ಟು ಹೆಣಗಳಿಗೆ ತಮ್ಮ ವಾರಿಸುದಾರರು ಸಿಕ್ರೆ, ಇನ್ನೊಂದಷ್ಟು ಜನ ಇನ್ನೂ ಅನಾಥವಾಗಿ ಬಿದ್ದಿದ್ದಾರೆ. ಸತ್ತವರಿಗೆ ತಮ್ಮ ಮನೆಯವರು ಬರುವರೋ ಇಲ್ಲವೇ ಎಂಬ ನಿರೀಕ್ಷೆಯೂ ಇಲ್ಲ. ಕಾರ್ಖಾನೆಯಾಗಿದೆ. ಜಗತ್ತು ಹೆಣಗಳನ್ನ ಹುಟ್ಟಿಸಿ ಹೊರಗೆ ದಾಟಿಸುತ್ತಿದೆ. ಅಬ್ಬಬ್ಬಾ ಬದುಕೇ ಸಾವಿನ ಸರತಿ ಸಾಲುಗಳನ್ನ ಕಣ್ಣಮುಂದೆ ಉಣಬಡಿಸಿ ಅದೇನನ್ನು ಸಾಧಿಸಲು ಹೊರಟಿದಿಯೋ ಗೊತ್ತಾಗುತ್ತಿಲ್ಲ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ