ಸ್ಟೇಟಸ್ ಕತೆಗಳು (ಭಾಗ ೬೩೧) - ಅಗತ್ಯ

ಹಲವು ಮನೆಗಳ ವ್ಯರ್ಥ ನೀರು, ಮನೆಯ ಹೊರಗಡೆ ಹೋಗಿ ಎಲ್ಲೋ ಒಂದು ಕಡೆ ಸೇರುತ್ತಿತ್ತು. ವ್ಯರ್ಥ ನೀರಿನಲ್ಲಿ ಸೇರಿದ ಹಲವಾರು ತ್ಯಾಜ್ಯ ವಸ್ತುಗಳು ಹರಿಯುವುದನ್ನು ಜನಸಾಮಾನ್ಯರು ಕಣ್ಣಿನಿಂದಲೇ ಕಾಣಬಹುದು. ಕೆಲವು ಕಡೆ ರಸ್ತೆ ದಾಟಬೇಕು ಅನ್ನೋ ಕಾರಣಕ್ಕೆ ಕೊಳವೆಗಳನ್ನು ಅಳಪಡಿಸಿದರು. ನೀರನ್ನು ತ್ಯಾಜ್ಯ ಆಗಾಗ ಅಡ್ಡಗಟ್ಟಿ ನಿಲ್ಲುತ್ತಿತ್ತು. ನೀರು ತ್ಯಾಜ್ಯ ನೀರು ತಾನು ಹರಿಯುವ ಜಾಗವನ್ನು ಬಿಟ್ಟು ರಸ್ತೆ ಮನೆಗಳಿಗೆ ಹೋಗಿ ಮಾತನಾಡಿಸಿ ಬರುತ್ತಿತ್ತು. ಇದನ್ನು ಸ್ವಚ್ಛಗೊಳಿಸುವ ಕಾರ್ಮಿಕರು ಆವಾಗ ನೆನಪಾಗುತ್ತಿದ್ದರು. ಒಮ್ಮೊಮ್ಮೆ ಆ ಕಾರ್ಮಿಕರು ಮನೆ ಮುಂದೆ ಹಾದುಹೋದರೆ ರಸ್ತೆಯಲ್ಲಿ ನಡೆದುಕೊಂಡು ಹೋದರೆ ಅವರನ್ನು ನೋಡುವ ಭಾವವೇ ಬೇರೆಯಾಗಿತ್ತು. ಆದರೆ ಕೆಲಸಕ್ಕೆ ಬೇಕಲ್ಲ. ಅದಕ್ಕಾಗಿ ಆ ದಿನ ಬರ ಹೇಳಿದರು. ಆದರೆ ಆ ದಿನ ಕೊಳವೆಯ ಒಳಗೆ ಇಳಿದ ಆ ಕಾರ್ಮಿಕನಿಗೆ ಒಳಗೆ ಉಸಿರಾಡುವುದಕ್ಕೂ ಕಷ್ಟವಾದ ಪರಿಸ್ಥಿತಿ ನಿರ್ಮಾಣ ಆಯಿತು. ಕೊನೆಗೆ ನೀರು ಸ್ವಚ್ಛವಾಗಿ ಹೊರಗಡೆ ಹೋಯಿತು ಜೊತೆಗೆ ಆತನ ಉಸಿರು ಕೂಡ. ಆತ ಶವವಾಗಿ ಹೊರಗಡೆ ಮಲಗಿಬಿಟ್ಟೆ. ಅವನ ಹತ್ತಿರ ಬಂದು ಕನಿಕರ ಸೂಚಿಸಿ ತಮ್ಮ ತಪ್ಪುಗಳಿಗೆ ಅವನ ಜೀವ ಬಲಿಯಾದುದರ ಬಗ್ಗೆ ಕಿಂಚಿತ್ತು ಯೋಚಿಸದ ಜನ ದೂರದಿಂದಲೇ ವಾಸನೆ ಎಂದು ಹಾದು ಹೋದರು. ಅವನ ಗೆಳೆಯರು ಅವನ ತಂದೆ ತಾಯಿ ಆ ಮಗುವನ್ನು ಅಪ್ಪಿಕೊಂಡು ಜೋರಾಗಿ ಅಳುತ್ತಾ ಸಮಾಜಕ್ಕೆ ಒಂದಷ್ಟು ಮಾತುಗಳನ್ನು ಹೇಳುತ್ತಾ ತಮ್ಮ ಮನೆಗೆ ಕರೆದೊಯ್ದರು. ಮತ್ತೆ ಮರುದಿನದಿಂದ ನೀರು. ಹರಿಯುವುದು ಸರಿಯಾಯಿತು ಮತ್ತೆ ಕೊಳಚೆ ನೀರು ತ್ಯಾಜ್ಯ ವಸ್ತುಗಳೊಂದಿಗೆ ಅಡ್ಡಗಟ್ಟುವವರೆಗೂ ಆ ಕಾರ್ಮಿಕರ ಬಗ್ಗೆ ಯಾರಿಗೂ ಯೋಚನೆ ಇಲ್ಲ. ಅವರ ಮನೆ ಹೇಗಿದೆಯೋ ಪರಿಸ್ಥಿತಿ ಹೇಗಿದೆಯಾ… ಅಗತ್ಯಕ್ಕೆ ಮಾತ್ರ ಜನ ನೆನಪಿಸಿಕೊಳ್ಳುತ್ತಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ