ಸ್ಟೇಟಸ್ ಕತೆಗಳು (ಭಾಗ ೬೩೪) - ಕೊನೆಯ ಪುಟ

ಸ್ಟೇಟಸ್ ಕತೆಗಳು (ಭಾಗ ೬೩೪) - ಕೊನೆಯ ಪುಟ

ಹಲವು ದಿನದಿಂದ ಹುಡುಕುತ್ತಿದ್ದೇನೆ ಆ ಪುಸ್ತಕ ಇನ್ನೂ ಸಿಕ್ಕಿಲ್ಲ. ಪ್ರತಿಯೊಬ್ಬರ ಹೆಸರಲ್ಲಿ ಪುಸ್ತಕಗಳು ತಯಾರಾಗಿರುತ್ತವೆ. ಅದರ ಮೊದಲನೇ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಎಲ್ಲವನ್ನು ಬರೆದಿರುತ್ತಾರೆ. ಆದರೆ ನನಗೆ ಹಲವರ  ಕೊನೆಯ ಪುಟಗಳನ್ನ ತಿಳಿದುಕೊಳ್ಳಬೇಕಿತ್ತು. ಯಾಕಂದ್ರೆ ಜೀವನದಲ್ಲಿ ಉಸಿರನ್ನು ನಿಲ್ಲಿಸಿ ಕೊನೆಯಾಗುವವರು, ಅವರನ್ನು ನಂಬಿದ ಜೀವಗಳು ಅವರ ಜೊತೆಗೆ ಎಷ್ಟಿದ್ದಾವೆ ಅಂತ ತಿಳಿದುಕೊಳ್ಳುವುದಕ್ಕೆ, ಯಾಕೆಂದರೆ ಬಿಟ್ಟು ಹೋಗುವವರು ಒಂದಷ್ಟು ವ್ಯವಸ್ಥೆ ಮಾಡಿದರೆ ಅವರನ್ನು ನಂಬಿದ ಕುಟುಂಬ ಬದುಕಬಹುದು. ಇಲ್ಲದಿದ್ದರೆ ಅವರು ಬದುಕಿಯೂ ಸತ್ತಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದೂರಿನ ಕತೆ. ಆ ಮಗನದ್ದೇನು ದೊಡ್ಡ ವಯಸ್ಸಲ್ಲ, ಅವನಿಗೊಂದು ಮದುವೆ ಮಾಡಿ ಮೊಮ್ಮಕ್ಕಳನ್ನ ಆಡಿಸ್ಬೇಕು ಅಂತ ಮನೆಯವರಿಗೆ ಆಸೆ. ಆತ ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸ್ತಾ ಬಂದಿದ್ದಾನೆ, ಪ್ರತಿದಿನ ಬೆಳಗ್ಗೆ ಪೇಪರ್ ಹಾಕುತ್ತಾನೆ, ಚಪ್ಪಲಿ ಮಾರುತ್ತಾನೆ, ಹೋವಿನ ಅಂಗಡಿ ಕೆಲಸ ಮಾಡ್ತಾನೆ. ಜೊತೆಗೆ ಸಣ್ಣಪುಟ್ಟ ಕೆಲಸಗಳಿಗೆ ಹೋಗುತ್ತಾನೆ, ಆ ದಿನ ಮನೆಯಿಂದ ಹೂವನ್ನು ಕೊಡೊಯ್ಯತ್ತಾ  ಇದ್ದವನಿಗೆ ಮೃತ್ಯು ಆತನ ಕೊನೆ ಪುಟವನ್ನು ಬರೆದಾಗಿತ್ತು, ಮುಂದೆ ಆಗುವ ಅಪಘಾತವನ್ನು ತಪ್ಪಿಸುವುದಕ್ಕೆ ಬ್ರೇಕ್ ಒತ್ತಿದಾಗ ದೇಹ ಸೀದಾ ಹೋಗಿ ಬಸ್ಸಿನ ಅಡಿಗೆ ಬಿದ್ದು ಉಸಿರು ನಿಂತು ಹೋಯ್ತು. ತನ್ನದೇ ಗಾಡಿಯಲ್ಲಿದ್ದ ಹೂವು ಆತನ ಎದೆಯ ಮೇಲೆ ಬಿತ್ತು, ಮತ್ತೆಂದೂ ಮಾತನಾಡದ ಮೌನ ಮುಖದಲ್ಲಿ ಗಟ್ಟಿಯಾಯಿತು. ಇನ್ನು ಮನೆಯವರು ಬದುಕುವುದು ಹೇಗೆ? ಆತ ಹೇಳುತ್ತೇನೆ ಅಂತ ಹೇಳಿ. ಹೋಗಿದ್ದ ಒಂದಷ್ಟು ಮಾತುಗಳು ಹಾಗೆ ಉಳಿದುಬಿಟ್ಟಿದ್ದಾವೆ. ಉತ್ತರವಿಲ್ಲದ ಪ್ರಶ್ನೆಗಳು ಉಳಿದಿದ್ದವೆ... ಇದಕ್ಕೋಸ್ಕರ ಬೇಕಿತ್ತು ಜೀವನದ ಪುಸ್ತಕದ ಕೊನೆಯ ಪುಟ… ಯಾರ ಕೊನೆಯ ಪುಟದಲ್ಲಿ ಏನಿದೆಯೋ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ