ಸ್ಟೇಟಸ್ ಕತೆಗಳು (ಭಾಗ ೬೩೫) - ಅವಳು

ಸ್ಟೇಟಸ್ ಕತೆಗಳು (ಭಾಗ ೬೩೫) - ಅವಳು

ಅಲ್ಲೊಂದು ಕಡೆ ದೊಡ್ಡವರು ಯಾರು ಮಾತನಾಡುತ್ತಿದ್ದರು, ಈ ಹೆಣ್ಣುಮಕ್ಕಳ ಬದುಕು ಅಂತಂದ್ರೆ ಒಂದಷ್ಟು ಓದು, ಆಮೇಲೆ ಒಂದು ಕೆಲಸ ಮತ್ತೆ ಮನೆಯವರಲ್ಲ ಸೇರಿ ಒಂದು ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ನೆಮ್ಮದಿಯ ಜೀವನವನ್ನ ಕನಸುಗಳ ಲೋಕವನ್ನು ಕಟ್ಟಿಕೊಂಡಿರುತ್ತಾಳೆ ಅಂತ. ಆದರೆ ಅವಳ ಬದುಕು ಹಾಗೆ ಇರಲಿಲ್ಲ ತನ್ನ ಓದಿಗೆ ತಾನೇ ಹಣ ಹೊಂದಿಸಬೇಕಿತ್ತು, ಹಾಗೆ ಓದಿನ ನಂತರ ಕೆಲಸವನ್ನು ಕಷ್ಟಪಟ್ಟ ಹುಡುಕಿದ್ಲು, ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಅದರಿಂದ ಆದ ಸಂಪಾದನೆಯಲ್ಲಿ ಮನೆಯ ದಿನದ ಖರ್ಚುಗಳನ್ನು ನೋಡಿಕೊಳ್ಳಬೇಕು, ತನ್ನ ಕುಟುಂಬದವರ ಆರೋಗ್ಯವನ್ನು ವಿಚಾರಿಸಬೇಕು, ಅವರ ಬೇಕು ಬೇಡಗಳಿಗೆ ತಾನು ಜೊತೆಯಾಗಿ ನಿಲ್ಲಬೇಕು, ಮದುವೆಯ ಬಗ್ಗೆ ಸದ್ಯಕ್ಕೆ ಯೋಜನೆಗಳಿಲ್ಲ ಮದುವೆಯಾಗಿ ತಂದೆ-ತಾಯಿಯನ್ನು ತೊರೆದು ಹೋಗುವ ಯೋಚನೆ ಅವಳಲ್ಲಿ ಇಲ್ಲ, ಮುಂದುವರೆದ ಹಾಗೆ ಬದುಕು ಅನ್ನೋದು ತನ್ನ ಕುಟುಂಬವನ್ನು ನೋಡಿಕೊಳ್ಳುವ ಕಾರಣಕ್ಕೋಸ್ಕರ ಹಲವಾರು ಆಸೆಗಳನೆಲ್ಲ ಅದುಮಿ ಹಿಡಿದಿಟ್ಟುಕೊಂಡಿದ್ದಾಳೆ. ಊರು ಜಾತ್ರೆ ಮದುವೆ ವಾರ್ಷಿಕೋತ್ಸವ ಎಲ್ಲವನ್ನು ಪರಿಚಯವಿಲ್ಲದಂತೆ ದೂರ ಮಾಡಿಬಿಟ್ಟಿದ್ದಾಳೆ, ಹಾಗಾದಾಗ ಇವಳನ್ನ ಕಂಡಾಗ ಮೇಲೆ ಹೇಳಿದ ಮಾತುಗಳಿಗೆ ಇವಳು ಒಪ್ಪಿಗೆಯಾಗುವಂತದ್ದಲ್ಲ, ಅಂತನ್ನಿಸಿತು... ಅವಳದ್ದು ಒಂದು ಕಥೆ ಅಷ್ಟೇ, ಇದೇ ರೀತಿ ಕಥೆಯಾಗುವವರು ಹಲವರಿದ್ದಾರೆ ಎಲ್ಲವನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಬಾರದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ