ಸ್ಟೇಟಸ್ ಕತೆಗಳು (ಭಾಗ ೬೩) - ಹೋರಾಟ
ನಾವೆಲ್ಲ ನೋಡಿರದ ಊರಿದು. ಇಲ್ಲಿಯ ಒಂದೆರಡು ಮಾಹಿತಿಯನ್ನ ಬಲ್ಲಮೂಲಗಳಿಂದ ಪಡೆದು ನಿಮಗೆ ದಾಟಿಸುತ್ತಿದ್ದೇನೆ. ಅಲ್ಲೊಂದು ಮಂದಬೆಳಕಿನ ಕೋಣೆಯೊಂದರಲ್ಲಿ ಚರ್ಚೆ ಆರಂಭವಾಗಿದೆ. ಅದರೊಳಗೆ ಊಟ ತಿಂಡಿಗೆ ವ್ಯವಸ್ಥೆಯೂ ಇದೆ. ಇದು ಮುಂದಿನ ಹಾದಿಯನ್ನು ನಿಭಾಯಿಸುವ ಮಾತುಕತೆ ಅನ್ನಿಸುತ್ತಿದೆ.
" ನೋಡಿ ಜನರನ್ನ ಮೂಲ ಸಮಸ್ಯೆಗಳ ಕಡೆಗೆ ಯೋಚಿಸದ ಹಾಗೆ ನಾವು ಮಾಡಬೇಕು" "ಹೌದೌದು ಅವರ ಆಲೋಚನೆಗೆ ಅಗತ್ಯವಿಲ್ಲದನ್ನ ತುಂಬಿ ನಾವು ಬದುಕಬೇಕು"
" ನಾವು ನಿಮ್ಮ ಕೆಲವೊಂದು ವಿಚಾರಗಳನ್ನು ತೆಗೆದುಕೊಂಡು ವಿರೋಧ ವ್ಯಕ್ತ ಪಡಿಸುತ್ತೇವೆ" "ಹಿಂದೊಮ್ಮೆ ನಾವು ನಿಮ್ಮ ವಿಚಾರ ತಗಾದೆ ತೆಗೆದಿದದ್ವು ಹಾಗೇ ಅಲ್ವಾ?.
" ನಾವು ಪತ್ರಿಕಾಗೋಷ್ಠಿ ಕರೆದು ನಿಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತೇವೆ, ಈ ಎಲ್ಲಾ ವಿಚಾರದ ನಡುವೆ ನಮ್ಮ ಹಸಿವು, ರೋಗ ಮತ್ತು ಶಿಕ್ಷಣ ಇದನ್ನು ಜನ ಮರೆತು ಹೋಗಬೇಕು".
"ಮತ್ತೆ ಅತ್ಯಾಚಾರಗಳನ್ನೆಲ್ಲಾ ಜಾತಿಯೊಳಗೆ ತಂದು ಮಾರಾಟಮಾಡುವ, ಒಟ್ಟಿನಲ್ಲಿ ನಾವು ಇದರ ಲಾಭವನ್ನು ಪಡ್ಕೋಬೇಕು"
" ಈ ಜನರಿದ್ದಾರಲ್ಲ ಅವರಿಗೆ ಅವರ ಬಗ್ಗೆ ಯೋಚನೆ ಬರದ ಹಾಗೆ ಮಾಡೋದು ನಮ್ಮ ಧ್ಯೇಯ ".
"ಹೌದು ಸರ್, ಮೊನ್ನೆ ಹಗರಣದ ದುಡ್ಡು ಎಲ್ಲಿ ಹೋಗಿದೆ ಎಂದು ಅವರು ಕೇಳಬಾರದು "
"ಕಾಮಗಾರಿಗಳ ದುಡ್ಡು ಮನೆ ತಲುಪಬೇಕು ಅಂತಿದ್ರೆ ,ನಾವು ಈ ಕೆಲಸ ಜೊತೆಗೆ ನಿಂತು ಮಾಡಬೇಕು. ವಿರೋಧಿಗಳು ಅವರ ಮುಂದೆ ಇಲ್ಲಿ ನಾವು ಅಣ್ಣ-ತಮ್ಮಂದಿರು ಅಲ್ವಾ?"
ಮರುದಿನದ ಪತ್ರಿಕೆಯಲ್ಲಿ 'ಇಬ್ಬರು ನಾಯಕರ ಜಟಾಪಟಿ '.
ವಾಕ್ಸಮರ ಬೆಳೆದಿತ್ತು, ಟಿವಿ ಪತ್ರಿಕೆ ಮೊಬೈಲ್ನಲ್ಲಿ ಹೋರಾಟಗಳು ಹೆಚ್ಚಾಗಿದ್ದವು. ಜನ ಇದರ ಬಗ್ಗೆ ಯೋಚಿಸ್ತಾ ಇದ್ರು, ಮಾತನಾಡುತ್ತಿದ್ದರು. ಜನರ ಮಾತು ಬಿಸಿಯಾಗಿದ್ದಾಗ ಹೋಟೆಲೊಂದರಲ್ಲಿ ಇಬ್ಬರು ನಾಯಕರು ಬಿಸಿ ಬೋಂಡಾ ಹೊಟ್ಟೆಗಿಳಿಸುತ್ತಾ ಇದ್ರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ