ಸ್ಟೇಟಸ್ ಕತೆಗಳು (ಭಾಗ ೬೪೦) - ದೇವರು

ಸ್ಟೇಟಸ್ ಕತೆಗಳು (ಭಾಗ ೬೪೦) - ದೇವರು

ಆಗಾಗ ಮನಸ್ಸಿಗೆ ನೋವಾದಾಗ ಮನಸ್ಸಿನ ಜೊತೆ ಮಾತನಾಡುವುದಕ್ಕೆ ಯಾರೋ ಬೇಕು ಅಂತ ಅನಿಸಿದಾಗ ದೇವರ ಬಳಿ ಕುಳಿತು ಒಬ್ಬನೇ ಮಾತನಾಡುತ್ತಾ ಇದ್ದೆ. ದೇವರು ನನ್ನೆಲ್ಲ ಪ್ರಶ್ನೆಗಳನ್ನ ಕೇಳಿಕೊಂಡು ಅದ್ಭುತವಾದ ಉತ್ತರವನ್ನ ಕೊಡುತ್ತಾನೆ ಅನ್ನೋ ನಂಬಿಕೆಯಲ್ಲಿ. ಹೀಗೆ ನನ್ನ ಮತ್ತು ಭಗವಂತನ ನಡುವಿನ ಸಂಭಾಷಣೆಯ ಮಾತುಕತೆಗಳು ಮುಂದುವರಿತಾನೆ ಇದ್ದವು. ಅವತ್ತು ದೇವರಿಗೆ ಏನು ಅನ್ನಿಸಿತೋ ಏನೋ ನೇರವಾಗಿ ಬಂದು ನನ್ನಲ್ಲಿ ಹೇಳಿಯೇ ಬಿಟ್ಟರು ನೋಡು ನೀನು ಪ್ರತಿ ಒಂದು ಸಣ್ಣ ವಿಚಾರಗಳಿಗೂ ಈ ದೇವಾಲಯದ ಒಳಗೆ ಬಂದು ಕುಳಿತು ಈ ಮೂರ್ತಿಯ ಒಳಕ್ಕೆ ನಾನಿದ್ದೇನೆ ಅಂತ ನಂಬಿಕೊಂಡು ಒಮ ಕೈಯನ್ನು ಮುಗಿಯುತ್ತೀಯ. ಒಪ್ಪಿಕೊಳ್ಳುತ್ತೇನೆ ಆದರೆ ನನಗೂ ಇದೊಂದೇ ರೂಪವಲ್ಲ ಹಲವು ರೂಪಗಳಿದ್ದಾವೆ. ಜಾತ್ರೆಯ ಸಮಯದಲ್ಲಿ ಹೊತ್ತು ಮೆರೆಯುತ್ತಿರುವ ಅಲಂಕಾರದಲ್ಲಿ,  ಬಂದ ಅಷ್ಟೂ ಭಕ್ತರ  ಕಣ್ಣಿನಲ್ಲಿರುವ ಬೆಳಕಿನಲ್ಲಿ, ತುಂಬಾ ಹಸಿದಿರುವ ಹೊಟ್ಟೆಯ ಒಳಗೆ ಹಸಿವಾಗಿ,  ಶ್ರಮ ವಹಿಸಿ ದುಡಿಯುವವನ ರಟ್ಟೆಯಲ್ಲಿ ಶಕ್ತಿಯಾಗಿ,ಆಲೋಚನೆಗಳಲ್ಲಿ ಬುದ್ಧಿಯಾಗಿ,  ಒಳಿತಿನ ವಿಚಾರಗಳಿಗೆ ಚಿಂತನೆಯಾಗಿ, ಪ್ರೀತಿಸುವ ಮನಸ್ಸುಗಳ ನಡುವೆ ದಾರಿಯಾಗಿ,ಅಮ್ಮನ ಮಾತಿನಲ್ಲಿ ಮಮತೆಯಾಗಿ, ತಂದೆಯ ಮಾತಿನಲ್ಲಿ ಶಕ್ತಿಯಾಗಿ,  ಗೆಳೆಯರ ಮಾತುಗಳ ನಡುವೆ ಚೈತನ್ಯವಾಗಿ, ಹೀಗೆ ನನ್ನ ರೂಪಗಳು ಬೇರೆ ಬೇರೆ ಕಡೆ ಪ್ರಕಟವಾಗುತ್ತಿರುತ್ತದೆ.ಆದರೆ ಸಮಸ್ಯೆ ಏನು ಗೊತ್ತಾ ನೀನು ಭಗವಂತ ಅನ್ನೋದಕ್ಕೆ ಒಂದಷ್ಟು ಚೌಕಟ್ಟುಗಳನ್ನ ರೂಪಗಳನ್ನು ಹಾಕಿಸಿ ಬಂಧಿಸಿ ಇಟ್ಟುಕೊಂಡಿದ್ದೀಯ ಒಮ್ಮೆ ಅವೆಲ್ಲವನ್ನ ಬಿಟ್ಟು ಯೋಚಿಸು ನಾನು ಅಣುರೇಣು ತೃಣಕಾಷ್ಟಗಳಲ್ಲಿ ನಿನ್ನ ಮುಂದಿರುತ್ತೇನೆ. ಹೀಗಂದ ದೇವರು ಮಾಯವಾದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ