ಸ್ಟೇಟಸ್ ಕತೆಗಳು (ಭಾಗ ೬೪೨) - ಕಿಸೆಗಳು

ಸ್ಟೇಟಸ್ ಕತೆಗಳು (ಭಾಗ ೬೪೨) - ಕಿಸೆಗಳು

ಕಿಸೆಗಳು ಇನ್ನಷ್ಟು ದೊಡ್ಡದಾಗಬೇಕಾಗಿದೆ, ಅಂಗಿಯಲ್ಲಿ ಒಂದು ಕಿಸೆ, ಪ್ಯಾಂಟಿನಲ್ಲಿ ಇನ್ನು ಮೂರು ಕಿಸೆ ಸಾಕಾಗುತ್ತಿಲ್ಲ. ಎಲ್ಲವನ್ನು ತುಂಬಿಸಿಕೊಳ್ಳಬೇಕು. ಯಾಕೆಂದರೆ ಹೋಗುವ ದಾರಿಯ ತುಂಬಾ ಜವಾಬ್ದಾರಿಗಳು ಕಾಯ್ತಾ ನಿಂತಿರುತ್ತವೆ, ಪ್ರತಿಯೊಬ್ಬರಿಗೂ ಇಂತಿಷ್ಟು ದಕ್ಷಿಣೆಗಳನ್ನು ಹಾಕಿಯೇ ಮುಂದುವರಿಯಬೇಕು, ಕೆಲವನ್ನು ಖರೀದಿಸಬೇಕು, ಕೆಲವನ್ನು ಮಾರಾಟ ಮಾಡಬೇಕು. ಈ ಖರೀದಿ ಮಾರಾಟದ ನಡುವೆ ಲಾಭ ನಷ್ಟಗಳನ್ನ ತಲೆಯ ಮೇಲೆ ಹೊತ್ತು ಸಾಗಬೇಕು. ಹಾಗೆ ಹೋಗುವ ದಾರಿಯಲ್ಲಿ ಎಲ್ಲವನ್ನು ನಿಭಾಯಿಸುವುದಕ್ಕೆ ಕಿಸೆಯೊಳಗೆ ತುಂಬಿರಬೇಕು. ದಾರಿ ನಡಿತಾ ನಡಿತಾ ಜವಾಬ್ದಾರಿಗಳನ್ನ ಕೊಂಡುಕೊಳ್ಳುತ್ತಾ ಮಾರಾಟ ಮಾಡುತ್ತಾ ದಕ್ಷಿಣೆ ನೀಡುತ್ತಾ ಹಣ ಸಂದಾಯ ಮಾಡುತ್ತಾ ಹೋದ ಹಾಗೆ ದಾರಿ ದೂರ ಇದ್ದರೂ, ಕಿಸೆಯಲ್ಲಿರುವ ಹಣ ಖಾಲಿಯಾಗಿ ಬಿಡುತ್ತದೆ. ಮುಂದಿನ ನಡಿಗೆಯನ್ನ ಹಾಗೆಯೇ ನಿಂತು ಇನ್ಯಾರದ್ದು ಹೆಗಲಿಗೆ ಕೈ ಕೊಟ್ಟು, ಇನ್ಯಾರದ್ದೋ ಗಾಡಿಗೆ ಕೈ ಹಿಡಿದು ಮುಂದೆ ಸಾಗಬೇಕಾದ ಪರಿಸ್ಥಿತಿ. ಅವರ ಋಣವನ್ನು ಸಂದಾಯ ಮಾಡಲೇಬೇಕು.ಹಾಗಾಗಿ ಕಿಸೆ ದೊಡ್ಡದಾದಷ್ಟು ಸಾಕಾಗುತ್ತಿಲ್ಲ. ಇನ್ನೊಂದು ನಾಲ್ಕು ಕಿಸೆಗಳನ್ನ ಸಂಪಾದಿಸಿಕೊಳ್ಳಬೇಕು, ಇನ್ನೊಂದಷ್ಟನ್ನು ತುಂಬಿಸಿಕೊಳ್ಳಬೇಕು, ಹೀಗೆ ತುಂಬಿಸಿಕೊಂಡು ನೆಮ್ಮದಿಯಿಂದ ಜವಾಬ್ದಾರಿಗಳನ್ನ ನಿಭಾಯಿಸುವ ಮಟ್ಟಕ್ಕೆ ಬಂದು ನಿಲ್ಲಬೇಕು. ಹಾಗಾಗಿ ಕೇಳಿಕೊಳ್ಳುವುದಿಷ್ಟೇ ಕಿಸೆ ದೊಡ್ಡದಾಗಬೇಕಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ