ಸ್ಟೇಟಸ್ ಕತೆಗಳು (ಭಾಗ ೬೪) - ಕರುವಿನ ಸ್ವಗತ

ಸ್ಟೇಟಸ್ ಕತೆಗಳು (ಭಾಗ ೬೪) - ಕರುವಿನ ಸ್ವಗತ

ಅಮ್ಮ ನನ್ನವಳು, ನನ್ನವಳು ಮಾತ್ರಾ. ಅವಳ ಮೇಲೆ ಹಕ್ಕು ಚಲಾಯಿಸಲು ನೀನ್ಯಾರು? ನೀನು ಏನೋ ತಂದು ಹಾಕ್ತೀಯಾ ಅಂದ ಮಾತ್ರಕ್ಕೆ ಅಧಿಕಾರ ಚಲಾಯಿಸುವುದು ತಪ್ಪು. ನಾನು ಅವಳ ಹೊಟ್ಟೆ ಒಳಗೆ ಇರುವಾಗ ತುಂಬಾ ಕನಸುಗಳನ್ನು ನನ್ನಲ್ಲಿ ಹೇಳುತ್ತಿದ್ದಳು.

ನಾನು ಅದೇ ಹಸಿವೆಯಿಂದ ಹೊರಬಂದೆ. ಆದರೆ ಈಗ ಹಸಿವೆಯೇ ನೀಗುತ್ತಿಲ್ಲ. ನಿನ್ನ ಕಣ್ಣಲ್ಲಿ ರಕ್ತವೇ ಇಲ್ವಾ? ಅಮ್ಮ ನನಗೆ ಇಟ್ಟ ಹಾಲನ್ನು ನೀನು ಕದಿಯುತ್ತಿದ್ದೀಯಾ? ನಾನು ಬದುಕುವುದು ಹೇಗೆ? ಅವಳ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದು ಹೊಟ್ಟೆ ತುಂಬಿಸಬೇಕಾಗಿದ್ದವಳನ್ನ  ಉಪವಾಸ ಮಲಗಿಸಿದ್ದೀಯಲ್ಲಾ. ಕೈಯಲ್ಲಿ ಹಾಲು ಕರೆಯುವೆಯಾದರೆ ಒಪ್ಪಿಕೊಳ್ಳುತ್ತೇನೆ. ಆದರೆ ಯಾವುದೋ ಯಂತ್ರವನ್ನು ತಂದು ಅಮ್ಮನ ಕೆಚ್ಚಲಿಗೆ ಹಾಕಿ ರಕ್ತವನ್ನು ಬಸಿಯುತ್ತಿದ್ದೀಯಾ. ನನ್ನ ಅಮ್ಮನ ಕಣ್ಣಲ್ಲಿ ಇಳಿಯುವ ನೀರು ನಿನಗೆ ಕಾಣಿಸುವುದೇ ಇಲ್ಲ, ಪಾತ್ರೆಯೊಳಗೆ ತುಂಬುವ ಹಾಲಿನ ಮುಂದೆ.

ಹಿಂದೊಂದು ದಿನ ನನ್ನ ದೊಡ್ಡಮ್ಮನ ಹೀಗೆ ಕಳೆದುಕೊಂಡೆ. ಯಂತ್ರಕ್ಕೆ ಭಾವನೆ ಇರುವುದಿಲ್ಲ ಆದರೆ ನಿನಗಿದೆ ಅಲ್ವಾ ? ನನ್ನಮ್ಮನ ಹಾಲು ಕುಡಿಯೋ ಸ್ವಾತಂತ್ರ್ಯವನ್ನು ಕಸಿಯಬೇಡಾ! ಅವಳು ನನ್ನ ಅಮ್ಮ ಮಾತ್ರ. ಹಸಿವೆಯಾಗಿ ಹಾಲು ಕುಡಿಯೋಕೆ ಅಮ್ಮನ ಬಳಿ  ಬಂದರೆ ನೀನು ಯಂತ್ರವೊಂದನ್ನು ಅವಳ ಕೆಚ್ಚಲಿಗೆ ಹಾಕಿರುತ್ತೀಯಾ? ಹೀಗಾದರೆ ನಾನು ಬದುಕುವುದು ಹೇಗೆ ? ನನಗೆ ತುಂಬಾ ಹಸಿವೆಯಾಗಿದೆ. ಓ ಮನುಷ್ಯಾ... ನಿನಗೂ ಸಣ್ಣವನಿರುವಾಗ ......

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ : ಇಂಟರ್ನೆಟ್ ತಾಣ