ಸ್ಟೇಟಸ್ ಕತೆಗಳು (ಭಾಗ ೬೫೩) - ದೂರ
ಮನೆ ಮಕ್ಕಳು ಸಮುದ್ರ ದಾಟಿದ್ದಾರೆ. ಸಮಯ ತುಂಬಾ ಕಳೆದರೂ ಅತ್ತ ಕಡೆಯಿಂದ ಕರೆಗಳು ಈ ಕಡೆಗೆ ದಾಟುತ್ತಿಲ್ಲ. ಪಾಪ ಸಮುದ್ರ ಅಲೆಗಳ ಶಬ್ದದ ನಡುವೆ ಮಾತುಗಳು ಈ ಊರನ್ನ ತಲುಪುವುದಕ್ಕೆ ಸಾಧ್ಯವಾಗಿಲ್ಲ ಅನ್ಸುತ್ತೆ. ಅದಕ್ಕಾಗಿ ಆ ಎರಡು ಹಿರಿಯ ಜೀವಗಳು ತಿಂಗಳಲ್ಲಿ ಒಂದೆರಡು ಸಲ ಆ ಸಮುದ್ರ ತೀರದಲ್ಲಿ ಕುಳಿತು ಅಲೆಗಳೆನಾದರೂ ತಮ್ಮ ಮಕ್ಕಳ ಸುದ್ದಿಯನ್ನು ತರಬಹುದೇನೋ ಅಂತ ಕಾಯ್ತಾ ಇರ್ತಾರೆ. ಪ್ರತಿದಿನವೂ ಅಲೆಗಳು ಒಂದೊಂದು ರೂಪದಲ್ಲಿ ತೀರವ ಬಳಸಿ ವಾಪಸು ಹೋಗುತ್ತಿದ್ದಾವೆ ವಿನಹ ಸುದ್ದಿ ತಿಳಿಸಲೇ ಇಲ್ಲ.ಆ ಎರಡು ಹಿರಿಯ ಜೀವಗಳಲ್ಲಿ ಅಮ್ಮನಿಗೆ ನಡೆಯೋಕಾಗೋದಿಲ್ಲ. ಆ ಅಜ್ಜ ತನ್ನ ಪ್ರೀತಿಯ ಮಡದಿಯನ್ನ ಕೈ ಹಿಡಿದು ಕರೆದುಕೊಂಡು ಬಂದು ತೀರದಲ್ಲಿ ಕುಳ್ಳಿರಿಸಿ ಆ ಸೌಂದರ್ಯವನ್ನ ಆಸ್ವಾದಿಸುವಂತೆ ಮಾಡಿ ಮತ್ತೆ ಕೈ ಹಿಡಿದು ಎಬ್ಬಿಸಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮಕ್ಕಳನ್ನ ನಂಬಿಕೊಂಡು ಬದುಕು ಕಟ್ಟಿಕೊಂಡವರು ಅವರಲ್ಲ ಆದರೆ ಮಕ್ಕಳು ಜೊತೆಗಿರಬೇಕು ಎನ್ನುವ ಆಸೆ ಸಹಜ. ಮಕ್ಕಳಿಗೆ ಅವರ ವಯಸ್ಸಿನಲ್ಲಿ ಅರ್ಥವಾಗಬಹುದು ಅಂತ ಇವರಂದು ಕೊಂಡಿದ್ದಾರೆ. ಈ ದಿನದ ಸಮುದ್ರದ ಜೊತೆಗಿನ ಮಾತುಕತೆಯನ್ನು ಮುಗಿಸಿ ಕೈ ಹಿಡಿದು ಮತ್ತೆ ತೀರದಲ್ಲೇ ನಡೆದು ಮನೆ ತಲುಪುವ ಯೋಚನೆಯಲ್ಲಿದ್ದಾರೆ. ಇತ್ತ ಕಡೆಯಿಂದ ಸಮುದ್ರ ಸುದ್ದಿಯನ್ನು ಅವರಿಗೆ ತಲುಪಿಸುತ್ತಿಲ್ಲ ಅತ್ತ ಕಡೆಯಿಂದ ಗಾಳಿಯ ಮೂಲಕವಾದರೂ ಸುದ್ದಿ ಇಲ್ಲಿಗೆ ಬರುತ್ತಿಲ್ಲ... ಒಟ್ಟಿನಲ್ಲಿ ಇದ್ದೂ ಇಲ್ಲದಂತಾಗಿರುವವರು ಇವರು..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ