ಸ್ಟೇಟಸ್ ಕತೆಗಳು (ಭಾಗ ೬೫೭) - ನೀರಿನ ಕಥೆ
ಮೊನ್ನೆ ತಾನೆ ನಾನು ಮಳೆರಾಯ ವಿಳಾಸ ಕಳೆದುಕೊಂಡು ಊರೆಲ್ಲ ಅಲೆದಾಡುತ್ತಿದ್ದಾನೆ ಅಂತ ಹೇಳಿದ್ದೆ, ಅದು ಮಳೆರಾಯನಿಗೆ ಗೊತ್ತಾಗಿದೆ ಅಂತೆ. ಆತ ತನ್ನ ಒಂದಷ್ಟು ಸಂಗಡಿಗರಿಗೆ ಹೇಳಿ ಆ ವಿಳಾಸಗಳನ್ನು ಹುಡುಕಿ ಈಗ ಎಲ್ಲೆಂದರಲ್ಲಿ ಮಳೆಗಳನ್ನ ಸುರಿಸ್ತಾ ಇದ್ದಾನೆ. ಈ ಮಳೆಗಳನ್ನ ಸುರಿಸಿರೋ ಖಾಲಿಯಾದ ಮೋಡಗಳು ಸುಮ್ಮನೆ ಅಡ್ಡಾಡ್ತಾ ಇದ್ದಾವೆ. ಮತ್ತೆ ನೀರು ತುಂಬಿಸಿಕೊಳ್ಳುವುದಕ್ಕೆ ಇನ್ನೊಂದಷ್ಟು ಸಮಯ ಕಾಯಲೇಬೇಕು. ಈ ಮಳೆ ನೀರು ಈ ಸುದ್ದಿಯನ್ನು ನನಗೆ ನಿನ್ನ ರಾತ್ರಿ ತಿಳಿಸಿದ್ದು. ರಾತ್ರಿ 12 ರ ಸಮಯ ನನ್ನ ಕೋಣೆಯ ಒಳಗೆ ಏನೋ ಸದ್ದು. ಸದ್ದು ಏನು ಅಂತ ನೋಡಿದ್ರೆ ನೀರು ಬಂದು ನನ್ನನ್ನ ಮಾತನಾಡಿಸುತ್ತಾ ಇದೆ ."ತುಂಬಾ ದಿನ ಆಯ್ತು ಹೊರಗಡೆ ಓಡಾಡ್ತಾ ಇದ್ದೆ, ನೀವು ನಿಮ್ಮ ಕೋಣೆಯನ್ನು ಹೇಗೆ ಇಟ್ಟುಕೊಂಡಿದ್ದೀರಿ, ನಮ್ಮ ಬಗ್ಗೆ ಬರೀತೀರಲ್ಲ ಹೇಗೆ ಅದಕೆಲ್ಲ ತಯಾರಿ ಮಾಡುತ್ತೀರಿ ಅಂತ ನೋಡ್ಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿತು. ಸರಿ ಆಯ್ತು ಹಾಗೆ ಮಾತುಕತೆ ಶುರು ಮಾಡ್ಕೊಂಡ್ವಿ ಮಾತುಕತೆಯಲ್ಲಿ ಏನು ಇಷ್ಟ ಆಯ್ತೋ ಗೊತ್ತಿಲ್ಲ ,ಮಧ್ಯಾಹ್ನ ಆಗ್ತಾ ಹೋದರು ನೀರು ವಾಪಸ್ಸು ಹೋಗುವ ಲಕ್ಷಣ ಕಾಣ್ತಾ ಇಲ್ಲ. ನನ್ನ ಮೇಲೆ ಅದೇನು ಪ್ರೀತಿ ಬಂದಿದೆಯೋ ಗೊತ್ತಿಲ್ಲ ಹಾಗಾಗಿ ಆ ಮಾತುಕತೆಯನ್ನು ಮತ್ತೂ ಮುಂದುವರಿಸಿದೆ. ಅದಕ್ಕೆ ತುಂಬಾ ಕಷ್ಟ ಇದೆಯಂತೆ ಸ್ವಚ್ಛಂದವಾಗಿ ಹರಿಯುವುದಕ್ಕೆ ಮನುಷ್ಯ ಬಿಡುತ್ತಿಲ್ಲ, ಹರಿಯುವ ಇರುವ ಜಾಗವನ್ನ ಕಟ್ಟಡ ಮಾಡಿ ಸಿಕ್ಕಿದಲ್ಲೆಲ್ಲ ಹರಿಯುವ ಹಾಗೆ ಮಾಡಿಬಿಟ್ಟಿದ್ದಾರೆ. ಅವರ ಕಷ್ಟ ಯಾರತ್ರ ಹೇಳಿಕೊಳ್ಳೋದು ಒಂದೊಂದು ಸಲ ಗಲೀಜುಗಳನ್ನು ಹೊತ್ತುಕೊಂಡು ಹೋಗುವಾಗ ತುಂಬಾ ನೋವಾಗುತ್ತದೆ ,ಆದರೆ ಏನು ಮಾಡುವ ಹಾಗಿಲ್ಲ ಅಂದುಕೊಂಡು ಸುಮ್ಮನೆ ಸಾಗಿ ಬಿಡ್ತಾರೆ. ಹೀಗೆ ತುಂಬಾ ಕಥೆ ಹೇಳಿದರು. ಸಂಜೆ ಸಿಕ್ಕಿದ್ರೆ ಮತ್ತೆ ಅವರತ್ರ ಹೊಸ ಕಥೆ ಕೇಳಿ ಹೇಳುತ್ತೇನೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ