ಸ್ಟೇಟಸ್ ಕತೆಗಳು (ಭಾಗ ೬೫) - ಸ್ವಾತಂತ್ರ್ಯ

ಸ್ಟೇಟಸ್ ಕತೆಗಳು (ಭಾಗ ೬೫) - ಸ್ವಾತಂತ್ರ್ಯ

ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್ಲರ ಕೈಗಳು ಹೆಮ್ಮೆಯ ನಮಸ್ಕಾರವನ್ನು ಅರ್ಪಿಸಿ ಧನ್ಯವಾದವು. ಆರೋಹಣ ಮಾಡಿದ ಹಿರಿಯ ಜೀವ ಮಾತನ್ನಾರಂಭಿಸಿದರು. "ಪಡೆದುಕೊಳ್ಳಲು ಕಷ್ಟಪಟ್ಟೆವು ನಿಜ, ಆದರೆ ಅದನ್ನ ಬಳಸಿಕೊಳ್ಳುವುದರಲ್ಲಿ ಸೋತಿದ್ದೇವೆ ಎನ್ನಿಸಿದೆ. ವರ್ಷಕ್ಕೊಮ್ಮೆ ಬಾವುಟವನ್ನೇರಿಸಲು ಎದೆಯೆತ್ತಿ ಜೈಕಾರ ಕೂಗಲು ಉದಾಸೀನ ಮಾಡುವವರು ನಾವಾಗಿರುವಾಗ ಬಲಿದಾನಗಳ ಮಹತ್ವ ಅರಿವಾಗುವುದು ಹೇಗೆ? ಆರಿಸುವ ನಾವು ಮತವನ್ನು ದಾನ ಮಾಡುವುದಲ್ಲ ಕರ್ತವ್ಯ ಹಕ್ಕು ಅಂದುಕೊಳ್ಳಬೇಕು. ಆರಿಸಿ ಬಂದವನು ನ್ಯಾಯ ಒದಗಿಸಬೇಕೇ ಹೊರತು ನನಗೆ ಅಧಿಕಾರವೇ ಬೇಕು, ಈ ಸ್ಥಾನ ಬೇಡ ಅದು ನೀಡುವುದಾದರೆ ಮಾತ್ರ ಇರುತ್ತೇನೆ ಇಲ್ಲವಾದರೆ ರಾಜೀನಾಮೆ ಹೀಗೆ ಬೆದರಿಕೆಗಳಾದರೆ ಇಲ್ಲಿ ಪ್ರಜೆಗಳ ಅಧಿಕಾರಕ್ಕೆ ಅರ್ಥ ಸಿಗುವುದು ಹೇಗೆ? ಮಕ್ಕಳೇ ಹಿಂದೆ ಆಗಿರೋದರ ಯೋಚನೆ ಬೇಡ. ಮುಂದಿನ ಹೆಜ್ಜೆ ಯೋಚಿಸಿ ಇಡೋಣ. ನನಗೆ ಶಿಕ್ಷಣ ಸಿಕ್ಕಿರುವುದು ಬರಿಯ ಅಕ್ಷರಾಭ್ಯಾಸಕ್ಕೆ ಅಲ್ಲ, ಜ್ಞಾನ ಸಂಪಾದನೆಗೆ, ಭವಿಷ್ಯದ ಯೋಜನೆಗೆ. ದೇಶಭಾಷೆಗಳ ಗೌರವವಿಲ್ಲದವ ಮಾನವನಾಗಲಿಕ್ಕೆ ಸಾಧ್ಯವಿಲ್ಲ. ನಾನು ಬದಲಾದರೆ ಭಾರತ ಬೆಳಗಿತು ". ಮಾತು ನಿಲ್ಲಿಸಿದರು. ನೋವಿತ್ತು, ಬದಲಾಗಬೇಕಾದ ಅನಿವಾರ್ಯತೆ ಜೊತೆಗೆ ಪುಟ್ಟ ಬೇಡಿಕೆಯೂ. ಕಾರ್ಯಕ್ರಮ ಮುಗಿಸಿ ಎಲ್ಲ ಮನೆಗೆ ಹೊರಟರು ಅವರು ಅಲ್ಲೇ ದೂರದಲ್ಲಿ ನಿಂತು ಗಾಳಿಯೊಂದಿಗೆ ಪೈಪೋಟಿಗೆ ಬಿದ್ದಿರುವ ಬಾವುಟವನ್ನೇ ಗಮನಿಸುತ್ತಿದ್ದರು. ಇದೇ ಹೋರಾಟ ಅವರು ಅಂದು ಹಾರಿಸಿದ ಬಾವುಟದಲ್ಲಿಯೂ ಇತ್ತು ಆದರೆ ಮನಸ್ಸಿನ ಒಳಗಿನ ಯಾತನೆ ಇಷ್ಟು ಇರಲಿಲ್ಲ…

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ