ಸ್ಟೇಟಸ್ ಕತೆಗಳು (ಭಾಗ ೬೬೧) - ನೀರೊಳಗೆ
ಮನೆಯ ಮುಂದೆ ಒಂದು ನದಿ ಹಾದು ಹೋಗುತ್ತೆ ಆ ನದಿಯ ಬದಿಯಲ್ಲೇ ನಡೆದರೆ ಆ ಊರಿನ ದೇವಸ್ಥಾನ ಸಿಗುತ್ತೆ. ಈ ಕಡೆ ನಿಮಗೆ ಯಾಕೆ ಹೇಳ್ತಾ ಇದೀನಿ ಅಂತಂದ್ರೆ ದೇವಸ್ಥಾನದ ಒಂದು ಪರ್ಲಾಂಗ್ ದೂರದಲ್ಲಿ ಒಂದು ಪುಟ್ಟ ಮನೆ. ಮೊದಲು ಚೆನ್ನಾಗಿಯೇ ನಡಿತಾ ಇತ್ತು. ಆದರೆ ಆಧಾರ ಸ್ತಂಭ ಅಂತ ಇದ್ದವರು. ಮಣ್ಣೊಳಗೆ ಮಣ್ಣಾದರು. ಆ ಮನೆಯಲ್ಲಿ ಉಳಿದವರು ಅಜ್ಜಿ ಮತ್ತು ಮೊಮ್ಮಗ ಮಾತ್ರ. ಅಜ್ಜಿ ತನ್ನ ಮಗನನ್ನ ಸೊಸೆಯನ್ನ ಗಂಡನನ್ನ ಎಲ್ಲರನ್ನ ಆ ಒಂದು ಅಪಘಾತದಲ್ಲಿ ಕಳೆದುಕೊಂಡಾಗ ಮೊಮ್ಮಗನಿಗೆ ಕೇವಲ ಒಂದು ವರ್ಷ ಅಂದಿನಿಂದ ಆತನನ್ನು ಸಾಕುವ ಜವಾಬ್ದಾರಿ ಅವಳ ಮೇಲೆ. ಆ ದಿನ ಬಟ್ಟೆ ಒಗೆಯುವಾಗ ನದಿಯ ಬದಿಯಲ್ಲಿ ಒಂದಷ್ಟು ಚಿಲ್ಲರೆ ಹಣ ಸಿಕ್ತು. ಎಲ್ಲೋ ದೇವಸ್ಥಾನಕ್ಕೆ ಬಂದವರು ದುಡ್ಡನ್ನ ನದಿಗೆ ಎಸೆದಿರಬಹುದು ಆ ದುಡ್ಡು ತಮಗೆ ಸಿಕ್ಕಿದೆ ಅಂದುಕೊಂಡು ಸಂತೋಷಪಟ್ಟರು ಮರುದಿನ ಮತ್ತೆ ಅದೇ ದುಡ್ಡಿಗಾಗಿ ನದಿಗೆ ತೆರಳಿದಾಗ ಅಲ್ಲಿ ಯಾವುದೇ ರೀತಿಯ ಕುರುಹು ಸಿಗಲಿಲ್ಲ. ಅಜ್ಜಿ ನದಿಗೆ ಇಳಿದು ಹುಡುಕಾಟ ಶುರು ಮಾಡಿದ್ಲು. ಆ ದಿನ ಸ್ವಲ್ಪ ಹೆಚ್ಚಿಗೆ ಹಣ ಸಿಕ್ತು. ಅದು ಅಭ್ಯಾಸವಾಯಿತು ಅಂದಿನಿಂದ ಅಜ್ಜಿಗೆ ಇದೇ ಕೆಲಸ ಇಡೀ ನದಿಯನ್ನ ಪ್ರತಿದಿನ ಹುಡುಕುವುದು ಕೆಲವು ದಿನ ನಾಣ್ಯ ಶಬ್ದ ಮಾಡಿದರೆ ಕೆಲವೊಂದು ಖಾಲಿ ಕೈ ಚಪ್ಪಾಳೆ ತಟ್ಟುತ್ತಿತ್ತು. ಹುಡುಗನಿಗೆನೂ ಜವಾಬ್ದಾರಿಯನ್ನು ತೆಗೆದುಕೊಂಡು ಸಂಸಾರವನ್ನು ನಿಭಾಯಿಸುವಷ್ಟು ವಯಸ್ಸಲ್ಲ. ಅಜ್ಜಿ ಮಾಡುವ ಕೆಲಸವನ್ನು ಪ್ರೀತಿಯಿಂದ ನೋಡುತ್ತಾ ಜೊತೆಗಿರ್ತಾ ಇದ್ದ. ಆ ದಿನ ನದಿಯ ಸೆಳೆತ ಹೆಚ್ಚಾಗಿತ್ತು. ನೀರಿನೊಳಗೆ ಮುಳುಗಿ ಕಾಣಿಕೆ ಹೆಕ್ಕಲು ಹೋದ ಅಜ್ಜಿ ಕಾಣೆಯಾಗಿಬಿಟ್ಟಳು. ಮೊಮ್ಮಗನಿಗೆ ದಿಕ್ಕು ತೋಚಲಿಲ್ಲ ಭಗವಂತನ ಗುಡಿಯ ಬಳಿಗೆ ಬಂದು ಕೈ ಮುಗಿದು ನಿಂತ ಭಗವಂತ ಮತ್ತೇನು ದಯಪಾಲಿಸಿದನು ಗೊತ್ತಿಲ್ಲ. ಆತ ಹೆಜ್ಜೆಗಳನ್ನು ಜೋಡಿಸುತ್ತಾ ನಡೆಯಲಾರಂಬಿಸಿದ. ತಲುಪುವ ದಾರಿ ಗೊತ್ತಿಲ್ಲ. ಆದರೆ ಭಗವಂತನ ಮೇಲೆ ನಂಬಿಕೆ ಮಾತ್ರ ಇತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ